ಭಾರತದಲ್ಲಿ 58,097 ಹೊಸ ಕೊರೊನಾ ಕೇಸ್: 534 ಜನ ಬಲಿ
ನವದೆಹಲಿ ಜನವರಿ 5: ಭಾರತದಲ್ಲಿ ದಿನ ಕಳೆದಂತೆ ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ದೇಶದಲ್ಲಿ ಪ್ರತಿದಿನ ಕೊರೊನಾದೊಂದಿಗೆ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೇಶದಲ್ಲಿ ಅಧಿಕ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಇರುವ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜೊತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 15,389 ಜನ ಗುಣಮುಖರಾಗಿದ್ದಾರೆ. ಜೊತೆಗೆ 534 ಜನ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಭಾರತದಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 2,14,004 ರಷ್ಟಿದ್ದು, ಒಟ್ಟು ಈವರೆಗೆ 3,43,21,803 ಜನ ಚೇತರಿಸಿಕೊಂಡಿದ್ದಾರೆ. ಇನ್ನೂ ಸಾವಿನ ಸಂಖ್ಯೆ 4,82,551ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 147.72 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ನಿನ್ನೆಯ 37,379 ಪ್ರಕರಣಗಳಿಗಿಂತ 55 ಪ್ರತಿಶತ ಹೆಚ್ಚಾಗಿದೆ.
ದೇಶವು ಡಿಸೆಂಬರ್ 28 ರಂದು ಸುಮಾರು 9,000 ಪ್ರಕರಣಗಳನ್ನು ವರದಿ ಮಾಡಿದೆ. ಆದ್ದರಿಂದ ಕೇವಲ ಒಂಬತ್ತು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಈಗ ಆರು ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ 2,135 ಓಮಿಕ್ರಾನ್ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 653 ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 464 ಪ್ರಕರಣಗಳಿವೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು 15-18 ವರ್ಷದೊಳಗಿನವರಿಗೆ ಲಸಿಕೆ ಹಾಕಲಾಗುತ್ತಿದೆ. ಭಾರತದಲ್ಲಿ 147 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಇದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಡೇಟಾವನ್ನು ಸಂಗ್ರಹಿಸಿದ ಅವಧಿಯಲ್ಲಿ ಸುಮಾರು 534 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಕೇರಳದಲ್ಲಿ 432 ಸಾವುಗಳು ಸಂಭವಿಸಿವೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಹಲವಾರು ರಾಜ್ಯಗಳು ರಾತ್ರಿ ಕರ್ಫ್ಯೂನಂತಹ ನಿರ್ಬಂಧಗಳನ್ನು ಘೋಷಿಸಿವೆ.
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಹೊಸ ಮತ್ತು ಹೆಚ್ಚು ಅಪಾಯಕಾರಿ ರೂಪಾಂತರಗಳನ್ನು ಹೊರಹೊಮ್ಮಿಸುವ ಅಪಾಯವನ್ನು ಹೆಚ್ಚಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಥವಾ WHO ನಿನ್ನೆ ಹೇಳಿದೆ. ಈ ರೂಪಾಂತರವು ಪ್ರಪಂಚದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದು ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಸಾಂಕ್ರಾಮಿಕ ರೋಗವನ್ನು ನಿವಾರಿಸಬಹುದು ಮತ್ತು ಜನ ಜೀವನವು ಹೆಚ್ಚು ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂಬ ಭರವಸೆಯನ್ನು ಮೂಡಿಸಿದೆ ಎಂದು WHO ಹೇಳಿದೆ. ಆದರೆ WHO ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್ ಸ್ಮಾಲ್‌ವುಡ್ ಓಮಿಕ್ರಾನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಹೆಚ್ಚುತ್ತಿರುವ ಸೋಂಕಿನ ಪ್ರಮಾಣಗಳ ವಿರುದ್ಧ ಪರಿಣಾಮವನ್ನು ಬೀರಬಹುದು ಎಂದು ಸುದ್ದಿ ಸಂಸ್ಥೆ AFPಗೆ ತಿಳಿಸಿದ್ದಾರೆ.

ಹೀಗಾಗಿ ಓಮಿಕ್ರಾನ್ ವೇಗವಾಗಿ ಹರಡುತ್ತಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಅಧಿಕಗೊಳ್ಳುತ್ತಿದ್ದು ದೇಶದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುನ್ನುಡಿ ಬರೆದಿದೆ.












Click it and Unblock the Notifications