ನಕ್ಸಲ್ ದಾಳಿ: 50 ಕೆಜಿ ಬಾಂಬ್, 10 ಅಡಿ ಆಳದ ಗುಂಡಿ!
ರಾಯ್ಪುರ: ಛತ್ತೀಸ್‌ಗಢ ನಕ್ಸಲರ ದಾಳಿಗೆ ನಲುಗಿದೆ. 10 ಪೊಲೀಸರು ಹುತಾತ್ಮರಾದ ಬೆನ್ನಲ್ಲೇ ಹೈಅಲರ್ಟ್ ಘೋಷಿಸಲಾಗಿದೆ. ಈ ಹೊತ್ತಲ್ಲೇ ಪೊಲೀಸರ ವಾಹನದ ಮೇಲೆ ದಾಳಿ ನಡೆಸಲು ನಕ್ಸಲರು ಬಳಸಿದ್ದ ಸ್ಫೋಟಕದ ವಿಚಾರ ಕೇಳಿದರೆ ಎದೆ ನಡುಗುತ್ತದೆ. ಹಾಗಾದ್ರೆ ನಕ್ಸಲರು (Naxal) ಕೃತ್ಯಕ್ಕೆ ಬಳಸಿದ್ದು ಎಷ್ಟು ಕೆಜಿ ಬಾಂಬ್ ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂದಹಾಗೆ ಛತ್ತೀಸ್‍ಗಢದ ದಾಂತೇವಾಡದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 10 ಪೊಲೀಸರು ಸೇರಿದಂತೆ ಒಟ್ಟು 11 ಮಂದಿ ಹುತಾತ್ಮರಾಗಿದ್ದಾರೆ. ಇದೀಗ ದಾಳಿ ಬಗ್ಗೆ ಮತ್ತಷ್ಟು ಸ್ಫೋಟಕ ವಿಚಾರ ಬಯಲಾಗಿದೆ. ಛತ್ತೀಸ್‍ಗಢದ (Chhattisgarh) ದಾಳಿಗೆ ನಕ್ಸಲರು ಬಳಸಿದ್ದು ಬರೋಬ್ಬರಿ 50 ಕೆಜಿ ಸುಧಾರಿತ ಸ್ಫೋಟಕ (IED) ಎಂಬ ವಿಚಾರ ನಡುಕ ಹುಟ್ಟಿಸಿದೆ. ರಸ್ತೆಯಲ್ಲಿ ಬಾಂಬ್ ಇಟ್ಟು ಪೊಲೀಸರನ್ನು ಬಲಿಪಡೆದವರ ವಿರುದ್ಧ ಕಠಿಣ ಕ್ರಮಕ್ಕೆ ಪ್ಲ್ಯಾನ್ ಮಾಡಲಾಗಿದೆ. ಅರಣ್ಯ ಪ್ರದೇಶದಲ್ಲಿ ನಕ್ಸಲರಿಗಾಗಿ ಭದ್ರತಾ ಪಡೆ ಜಾಲಾಡುತ್ತಿದೆ.

ಘಟನೆ ನಡೆದಿದ್ದು ಹೇಗೆ?
ಬುಧವಾರ ಮಧ್ಯಾಹ್ನ ಛತ್ತೀಸ್‌ಗಢದ ದಾಂತೇವಾಡದಲ್ಲಿ ಮಾವೋವಾದಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಛತ್ತೀಸ್‍ಗಢದ ಅರನ್‍ಪುರದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆ ಛತ್ತೀಸ್‍ಗಢದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಸೈನಿಕರು ಆ ಪ್ರದೇಶಕ್ಕೆ ಬಾಡಿಗೆಗೆ ಪಡೆದ ಮಿನಿ ವ್ಯಾನ್‍ನಲ್ಲಿ ತೆರಳಿದ್ದರು. ಆದರೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರು ವಾಪಸ್ ಆಗುವಾಗ ನಕ್ಸಲರು ಭೀಕರ ದಾಳಿ ನಡೆಸಿದ್ದಾರೆ. ಅಲ್ಲದೆ ಈ ದಾಳಿಗೆ ನಕ್ಸಲರು ಖತರ್ನಾಕ್ ಪ್ಲ್ಯಾನ್ ಮಾಡಿದ್ದು ಬಯಲಾಗಿದೆ.
10 ಅಡಿ ಆಳದ ಗುಂಡಿ!
ಪೊಲೀಸರನ್ನು ಬಲಿ ಪಡೆದಿರುವ ನಕ್ಸಲರು ತಮ್ಮ ಕೃತ್ಯಕ್ಕೆ ಅದೆಷ್ಟು ಸಿದ್ಧತೆ ನಡೆಸಿದ್ದರು ಎಂದರೆ, ಬಾಂಬ್ ಸ್ಫೋಟದ ಜಾಗದಲ್ಲಿ ಸುಮಾರು 10 ಅಡಿ ಆಳ ಹಾಗೂ 20 ಅಡಿ ಅಗಲದ ದೊಡ್ಡ ಗುಂಡಿ ತೋಡಿದ್ದರು ಎನ್ನಲಾಗಿದೆ. ಅಲ್ಲದೆ ಇದೇ ಗುಂಡಿ ಒಳಗೆ 50 ಕೆಜಿ ಸುಧಾರಿತ ಸ್ಫೋಟಕ (IED) ತುಂಬಿದ್ದರು. ಪೊಲೀಸರು ಕಾರ್ಯಾಚರಣೆಯನ್ನ ಮುಗಿಸಿ ವಾಪಸ್ ಬರುವ ಸಂದರ್ಭದಲ್ಲೇ ದಾಳಿಗೆ ಸ್ಕೆಚ್ ಹಾಕಲಾಗಿತ್ತು. ವಾಪಸ್ ಬರುತ್ತಿದ್ದ ವಾಹನವನ್ನು ಸ್ಫೋಟಿಸಿ 10 ಪೊಲೀಸರ ಹತ್ಯೆಗೆ ಕಾರಣರಾಗಿದ್ದಾರೆ ನಕ್ಸಲರು.

150 ಮೀ. ದೂರದಲ್ಲಿ ಅವಶೇಷ
ಈ ಸ್ಫೋಟದ ತೀವ್ರತೆ ಅದೆಷ್ಟು ಬಲವಾಗಿತ್ತು ಎಂದರೆ, ವಾಹನ ಸ್ಫೋಟದ ಸ್ಥಳದಿಂದ ಕನಿಷ್ಠ 20 ಅಡಿ ದೂರಕ್ಕೆ ಹಾರಿ ಬಿದ್ದಿದೆ. ಸ್ಫೋಟದ ಸ್ಥಳದಿಂದ ಸುಮಾರು 150 ಮೀ. ದೂರದಲ್ಲಿ ಚೂರಾದ ವಾಹನದ ಅವಶೇಷಗಳು ಸಿಕ್ಕಿವೆ ಎಂದರೆ ಲೆಕ್ಕ ಹಾಕಿ ಅದೆಷ್ಟು ಬಲವಾಗಿ ಸ್ಫೋಟ ಸಂಭವಿಸಿರಬೇಡ. ಘಟನೆ ನಡೆದ ಬಳಿಕ ವಿಶೇಷ ಭದ್ರತಾ ಪಡೆಗಳು ಕಾಡಿನಲ್ಲಿ ಅಡಗಿರುವ ಮಾವೋವಾದಿಗಳನ್ನು ಹುಡುಕುತ್ತಿದ್ದಾರೆ. ಈ ಪ್ರದೇಶ 3 ರಾಜ್ಯಗಳ ಮಧ್ಯೆ ಇದ್ದು, ತ್ರಿ-ಜಂಕ್ಷನ್ ಎಂದು ಕರೆಯಲಾಗುತ್ತದೆ.
ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಭದ್ರತಾ ಸಿಬ್ಬಂದಿ ಈ ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಈಗ ಸ್ಫೋಟಿಸಿರುವ ವಾಹನದ ಮೇಲೆ ಹಲವು ದಿನಗಳಿಂದ ನಕ್ಸಲರು ಕಣ್ಣಿಟ್ಟಿದ್ದರು ಎನ್ನಲಾಗಿದೆ. ಅದರ ಚಲನವಲನ ಸೂಕ್ಷ್ಮವಾಗಿ ಗಮನಿಸಿ ದಾಳಿ ಮಾಡಿದ್ದಾರೆ. ಈ ಮೂಲಕ ದಾಳಿಗೆ ಮೊದಲೇ ನಕ್ಸಲರು ಸಿದ್ಧರಾಗಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ಘಟನೆ ನಡೆದಿರುವ ಸುತ್ತಮುತ್ತಲ ಪ್ರದೇಶದಲ್ಲಿ ನಕ್ಸಲರಿಗಾಗಿ ಹುಡುಕಾಟ ತೀವ್ರಗೊಂಡಿದೆ.

ಇಷ್ಟೆಲ್ಲದರ ನಡುವೆ ನಕ್ಸಲ್ ದಾಳಿ ಹಿನ್ನೆಲೆಯಲ್ಲಿ ಒಡಿಶಾ ರಾಜ್ಯದ ಒಟ್ಟು 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಘಟನೆ ನಂತರ ಛತ್ತೀಸ್‍ಗಢದ ಗಡಿಭಾಗದ ಜಿಲ್ಲೆಗಳಾದ ಮಲ್ಕಾನ್‍ಗಿರಿ, ಕೊರಾಪುಟ್, ಬರ್ಗಾರ್ಡ್, ನುವಾಪಾದ ಮತ್ತು ನಬರಂಗ್‍ಪುರದಲ್ಲಿ ಇಂಚಿಂಚು ಜಾಗವನ್ನೂ ಪರಿಶೀಲಿಸಲಾಗುತ್ತಿದೆ. ಭದ್ರತೆಯನ್ನೂ ಹೆಚ್ಚಿಸಿ ಸರ್ಚಿಂಗ್ ಆಪರೇಷನ್ ಮುಂದುವರಿಸಲಾಗಿದೆ.












Click it and Unblock the Notifications