ಚಾಣಕ್ಯ ನೀತಿ: ಉದ್ಯಮಿಗಳಿಗೆ 5 ಬಲಿಷ್ಠ ಯಶಸ್ಸಿನ ಸೂತ್ರಗಳು, ಒಮ್ಮೆ ಓದಿ
ಉದ್ಯಮಿಯಾಗುವುದು ಎಂದರೆ ಸುಲಭದ ಮಾತಲ್ಲ, ಒಂದೇ ಕಾಲಕ್ಕೆ ಹತ್ತಾರು ಜವಾಬ್ದಾರಿಗಳನ್ನು ನಿಭಾಯಿಸಬೇಕು. ಸ್ಟ್ರಾಟಜಿ, ಸಂಪನ್ಮೂಲಗಳ ನಿರ್ವಹಣೆ, ನಾಯಕತ್ವ ಹೀಗೆ ಎಲ್ಲವನ್ನೂ ಸರಿದೂಗಿಸುವುದು ಒಂದು ದೊಡ್ಡ ಸವಾಲೇ ಸರಿ.
ಇಂತಹ ಕಠಿಣ ಹಾದಿಯಲ್ಲಿ ನಮಗೆ ದಾರಿ ದೀಪವಾಗಬಲ್ಲವರು ಮತ್ಯಾರು ಅಲ್ಲ, ಅಪ್ರತಿಮ ತಂತ್ರಜ್ಞ ಆಚಾರ್ಯ ಚಾಣಕ್ಯ! ಕಡುಬಡವ ಬಾಲಕನನ್ನು ಇಡೀ ಭಾರತದ ಚಕ್ರವರ್ತಿಯನ್ನಾಗಿ ಮಾಡಿದ ಈ ಕಿಂಗ್ ಮೇಕರ್ ನಿಂದ ಉದ್ಯಮಿಗಳು ಕಲಿಯಬಹುದಾದ 5 ಪ್ರಮುಖ ಪಾಠಗಳು ಇಲ್ಲಿವೆ ನೋಡಿ.

1. ಗುರಿ ಮುಟ್ಟುವವರೆಗೆ ಯೋಜನೆ ರಹಸ್ಯವಾಗಿರಲಿ
ಮ್ಯಾಜಿಕ್ ಶೋಗಳಲ್ಲಿ ಮ್ಯಾಜಿಷಿಯನ್ ತನ್ನ ಟ್ರಿಕ್ ಅನ್ನು ಮೊದಲೇ ಹೇಳಿಕೊಟ್ಟರೆ ಅದರಲ್ಲಿ ಕುತೂಹಲವಿರುವುದಿಲ್ಲ. ಉದ್ಯಮದಲ್ಲೂ ಅಷ್ಟೇ! ನಿಮ್ಮ ಯೋಜನೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರುವವರೆಗೆ ಅದನ್ನು ಗುಪ್ತವಾಗಿಡಿ ಎಂದು ಚಾಣಕ್ಯರು ಹೇಳುತ್ತಾರೆ. ವಿಶೇಷವಾಗಿ ಸ್ಟಾರ್ಟಪ್ ನಡೆಸುವವರು ತಮ್ಮ ಐಡಿಯಾಗಳನ್ನು ಸರಿಯಾದ ಸಮಯ ಬರುವವರೆಗೂ ಯಾರಿಗೂ ಹೇಳದೆ ಗೌಪ್ಯವಾಗಿ ಇಡುವುದು ಬಹಳ ಮುಖ್ಯ.
2. ಕಲಿಕೆಗೆ ಎಂದು ಕೊನೆಯಿಲ್ಲ
ಉದ್ಯಮಿಗಳಿಗೆ ನಿರಂತರ ಕಲಿಕೆ ಅತ್ಯಗತ್ಯ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ ಆಗಿದೆ. ದಿನವೂ ಏನಾದರೊಂದು ಹೊಸತನ್ನು ಕಲಿಯಿರಿ ಅದು ನಮ್ಮ ಬೆಳವಣಿಗೆಗೆ ನೆರವಾಗುತ್ತದೆ, ಒಂದು ದಿನವನ್ನೂ ವ್ಯರ್ಥ ಮಾಡಬೇಡಿ ಎಂಬುದು ಚಾಣಕ್ಯರ ಕಿವಿಮಾತು. ಇಂದಿನ ಯಶಸ್ವಿ ಉದ್ಯಮಿಗಳಾದ ಎಲೋನ್ ಮಸ್ಕ್ ಅಥವಾ ವಾರೆನ್ ಬಫೆಟ್ ಅವರನ್ನೇ ನೋಡಿ, ಅವರು ಇಂದಿಗೂ ದಿನದ ಬಹುಭಾಗವನ್ನು ಓದು ಮತ್ತು ಕಲಿಕೆಗೆ ಮೀಸಲಿಡುತ್ತಾರೆ.
3. ಯಾರನ್ನು ನಂಬಬೇಕು ಎಂಬುದು ವ್ಯವಹಾರದ ಮೇಲೆ ಅವಲಂಬಿಸಿದೆ
ಉದ್ಯಮದಲ್ಲಿ ಒಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಹಾಗಾಗಿ ಇಲ್ಲಿ ಸಹಯೋಗ ಬೇಕೇ ಬೇಕು. ಆದರೆ ಇಲ್ಲಿ ಚಾಣಕ್ಯರು ಒಂದು ಎಚ್ಚರಿಕೆ ನೀಡುತ್ತಾರೆ. "ಅಸಮರ್ಪಕ ವ್ಯಕ್ತಿಯನ್ನು ನಂಬುವುದು ಒಬ್ಬ ಶತ್ರುವಿಗಿಂತಲೂ ಅಪಾಯಕಾರಿ" ಶತ್ರು ಎದುರಿನಿಂದ ಬರುತ್ತಾನೆ, ಆದರೆ ಅಸಮರ್ಪಕ ನಂಬಿಕಸ್ತ ನಿಮ್ಮನ್ನು ಒಳಗಿಂದಲೇ ಕುಸಿಯುವಂತೆ ಮಾಡುತ್ತಾನೆ. ನೀವು ಕೆಲಸಕ್ಕೆ ತೆಗೆದುಕೊಳ್ಳುವವರಿಂದ ಹಿಡಿದು ಹೂಡಿಕೆದಾರರವರೆಗೆ ಪ್ರತಿಯೊಬ್ಬರ ಉದ್ದೇಶಗಳನ್ನು ಸರಿಯಾಗಿ ಕಂಡು ಹಿಡಿಯಬೇಕು. ಎಲ್ಲರ ಆಯ್ಕೆ ಜಾಗ್ರತೆಯಿಂದ ಮಾಡಬೇಕು.
4. ಅಗತ್ಯವಿದ್ದಾಗ 'ಗಾಂಭೀರ್ಯ' ಪ್ರದರ್ಶಿಸಿ
ನೀವು ಹೊಸಬರಿರಲಿ ಅಥವಾ ಅನುಭವಿಯಾಗಿರಲಿ, ಉದ್ಯಮದಲ್ಲಿ ಕೆಲವೊಮ್ಮೆ ಕಠಿಣವಾಗಿ ವರ್ತಿಸುವುದು ಅನಿವಾರ್ಯವಾಗಿರುತ್ತದೆ. ಚಾಣಕ್ಯ ನೀತಿಯ ಒಂದು ಪ್ರಸಿದ್ಧ ಉದಾಹರಣೆಯೆಂದರೆ, "ವಿಷವಿಲ್ಲದ ಹಾವೂ ಸಹ ತಾನು ವಿಷಕಾರಿ ಎಂಬಂತೆ ನಟಿಸಬೇಕು." ಇಲ್ಲದಿದ್ದರೆ ಜನರು ಅದನ್ನು ಸುಲಭವಾಗಿ ಹೊಡೆದು ಹಾಕುತ್ತಾರೆ. ಹಾಗಾಗಿ, ವ್ಯವಹಾರದಲ್ಲಿ ನಿಮ್ಮ ಗೌರವವನ್ನು ಉಳಿಸಿಕೊಳ್ಳಲು ಮತ್ತು ಕೆಲಸ ಸಾಧಿಸಿಕೊಳ್ಳಲು ಅಗತ್ಯವಿದ್ದಾಗ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ನಾಯಕತ್ವದ ಮುಖ್ಯ ಲಕ್ಷಣವಾಗಿದೆ.
5. ಭಯವನ್ನು ಮೀರಿದ, ಧೈರ್ಯವನ್ನೇ ಅಸ್ತ್ರವಾಗಿಸಿ
ವ್ಯವಹಾರದಲ್ಲಿ ಸವಾಲುಗಳು ಮತ್ತು ಸೋಲಿನ ಭಯ ಸಹಜವಾಗಿ ಇದ್ದೇ ಇರುತ್ತದೆ. ಆದರೆ ಚಾಣಕ್ಯರ ಪ್ರಕಾರ ಭಯವನ್ನು ದೂರದಿಂದ ನೋಡಿ ಹೆದರುವುದಕ್ಕಿಂತ ಅದನ್ನು ಅರ್ಥಮಾಡಿಕೊಳ್ಳಬೇಕು. "ಯಾರು ಸದಾ ಜಾಗರೂಕರಾಗಿರುತ್ತಾರೋ ಅವರಿಗೆ ಭಯವಿರುವುದಿಲ್ಲ" ಭಯ ಬಂದಾಗ ಅದನ್ನು ಕೇವಲ ಒಂದು 'ಡೇಟಾ' ಅಥವಾ ಮಾಹಿತಿಯಂತೆ ವಿಶ್ಲೇಷಿಸಿ. ಅದು ಎಲ್ಲಿಂದ ಬರುತ್ತಿದೆ ಎಂದು ತಿಳಿದು ಸರಿಯಾದ ನಿರ್ಧಾರ ಕೈಗೊಂಡರೆ ಜಯ ನಿಮ್ಮದೇ.












Click it and Unblock the Notifications