ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; 5 ಔಷಧ ಕಂಪನಿಗಳಿಗೆ ಪರವಾನಗಿ ನೀಡಿದ ಕೇಂದ್ರ
ನವದೆಹಲಿ, ಮೇ 21: ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿಗೆ ಔಷಧಗಳ ಉತ್ಪಾದನೆಗೆ ಐದು ಕಂಪನಿಗಳಿಗೆ ಪರವಾನಗಿ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬ್ಲ್ಯಾಕ್ ಫಂಗಸ್ ಸೋಂಕಿಗೆ ಸದ್ಯಕ್ಕೆ ಆಂಫೊಟೆರಿಸಿನ್ ಬಿ ಎಂಬ ಔಷಧ ಬಳಸಲಾಗುತ್ತಿದ್ದು, ಜುಲೈ ತಿಂಗಳಿನಿಂದ ಈ ಕಂಪನಿಗಳು 1,11,000 ವಯಲ್ ಔಷಧ ಉತ್ಪಾದನೆ ಆರಂಭಿಸಲಿವೆ. ಹೈದರಾಬಾದ್‌ನ ನ್ಯಾಟ್ಕೊ ಫಾರ್ಮಾಸ್ಯುಟಿಕಲ್, ವಡೋದರದ ಅಲೆಂಬಿಕ್ ಫಾರ್ಮಾಸ್ಯುಟಿಕಲ್, ಗುಜರಾತ್‌ನ ಗೂಫಿಕ್ ಬಯೋಸೈನ್ಸಸ್ ಲಿಮಿಟೆಡ್ ಹಾಗೂ ಲೈಕಾ, ಪುಣೆಯ ಎಂಕ್ಯೂರ್ ಫಾರ್ಮಾಸ್ಯುಟಿಕಲ್ ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ.
ಆಮದಿನ ಜೊತೆಗೆ ಶಿಲೀಂಧ್ರ ವಿರೋಧಿ ಔಷಧಗಳ ದೇಶೀಯ ಲಭ್ಯತೆಗೆ ಪೂರಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದ್ದು, ಆಂಫೊಟೆರಿಸಿನ್ ಬಿ 3,63,000 ವಯಲ್‌ಗಳನ್ನು ಮೇ ತಿಂಗಳಿನಲ್ಲಿ ಆಮದು ಮಾಡಿಕೊಳ್ಳಲಾಗುವುದು. ಈ ಮೂಲಕ ದೇಶದಲ್ಲಿ 5,26,752 ವಯಲ್‌ಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದೆ.

ಜೂನ್‌ನಲ್ಲಿ 3,15,000 ವಯಲ್‌ಗಳ ಔಷಧಿಯನ್ನು ಆಮದು ಮಾಡಿಕೊಳ್ಳಲಾಗುವುದು. ಜೂನ್‌ಲ್ಲಿ ದೇಶಾದ್ಯಂತ 5,70,114 ವಯಲ್ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಹಲವು ರಾಜ್ಯಗಳಲ್ಲಿ ಮ್ಯೂಕರ್ ಮೈಕೋಸಿಸ್- ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಂಫೊಟೆರಿಸಿನ್ ಬಿ ಔಷಧಗಳ ಅಭಾವವೂ ಎದುರಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿದೆ.
ಆಂಫೊಟೆರಿಸಿನ್ ಬಿ ಹೆಚ್ಚಿನ ಉತ್ಪಾದನೆಗೆ ಕೇಂದ್ರ ಆರೋಗ್ಯ ಸಚಿವಾಲಯ, ಔಷಧ ಇಲಾಖೆ ಹಾಗೂ ವಿದೇಶಾಂಗ ಸಚಿವಾಲಯದಿಂದ ಪ್ರಯತ್ನ ಮುಂದುವರೆಸಿರುವುದಾಗಿ ತಿಳಿಸಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರದವರೆಗಿನ ಅಧಿಕೃತ ಮಾಹಿತಿ ಪ್ರಕಾರ 5,500 ಜನರು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗಿದ್ದಾರೆ. ಒಟ್ಟು 126 ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದು ಮಹಾರಾಷ್ಟ್ರವೊಂದರಲ್ಲೇ 90 ಸಾವಿನ ಪ್ರಕರಣಗಳು ದೃಢಪಟ್ಟಿದೆ. ಬ್ಲ್ಯಾಕ್ ಫಂಗಸ್ ಪ್ರಕರಣಗಳಿಂದ ಸಾವನ್ನಪ್ಪುತ್ತಿರುವ ರಾಜ್ಯಗಳಲ್ಲಿ ಹರಯಾಣ ಎರಡನೇ ಸ್ಥಾನದಲ್ಲಿದ್ದು ಈವರೆಗೆ 14 ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications