4 ಹೊಸ ಕಾರ್ಮಿಕ ಸಂಹಿತೆ ಜಾರಿ: ಕೆಲಸದ ಅವಧಿ ಇನ್ಮುಂದೆ ದಿನಕ್ಕೆ 12 ಗಂಟೆ!
ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ಕಾರ್ಮಿಕ ಕಲ್ಯಾಣದ ದೃಷ್ಟಿಯಿಂದ ಈ ಸಂಹಿತೆ (ಹೊಸ ಬದಲಾವಣೆ)ಗಳನ್ನು ಪರಿಚಯಿಸಿದೆ. ವೇತನ ಸಂಹಿತೆ (2019), ಕೈಗಾರಿಕಾ ಸಂಪರ್ಕ ಸಂಹಿತೆ (2020), ಸಾಮಾಜಿಕ ಭದ್ರತಾ ಸಂಹಿತೆ (2020) ಹಾಗೂ ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ (2020) ಜಾರಿಗೆ ತರಲಾಗಿದೆ. ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಆದರೆ ಇದರಿಂದ ಕಾರ್ಮಿಕರಿಗೆ ಹೆಚ್ಚು ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಕಾಂಗ್ರೆಸ್ ದೂರಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ಆದರೆ ಅದು ಕಾರ್ಮಿಕ ವಿರೋಧಿ, ಉದ್ಯಮಿಗಳ ಪರವಾಗಿರುವ ಕಾನೂನು ಎಂದು ಕಾಂಗ್ರೆಸ್ ಹೇಳಿದ್ದು, ಇದನ್ನು ವಿರೋಧಿಸಿದ ಬೀದಿಗೆ ಇಳಿದಿದೆ. ಕೇಂದ್ರ ಸರ್ಕಾರವು ಕಾರ್ಮಿಕರ ಭವಿಷ್ಯಕ್ಕೆ ಸಮಾಧಿ ಕಟ್ಟಿ, ಅದರ ಮೇಲೆ ಶ್ರೀಮಂತ ಉದ್ಯಮಗಳ ಸಾಮ್ರಾಜ್ಯ ಕಟ್ಟಲು ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷವು ದೂರಿದೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾರ್ಮಿಕ ನಿಯಮಗಳು ಇಷ್ಟು ದಿನ ಕಾರ್ಮಿಕರಿಗೆ ಇದ್ದ ಭದ್ರತೆ ಹಾಗೂ ಶಕ್ತಿಗೆ ಎಳ್ಳು ನೀರು ಬಿಡುತ್ತಿದೆ.
ಹೊಸ ನಿಯಮಗಳ ಪ್ರಕಾರ..
1. ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಮಿತಿ 100ರಿಂದ 300ಕ್ಕೆ ಏರಿಸಲಾಗಿದೆ. ಶೇ 80% ಕಾರ್ಖಾನೆಗಳು ಅನುಮತಿ ಇಲ್ಲದೇ ಕಾರ್ಮಿಕರನ್ನು ವಜಾಗೊಳಿಸಬಹುದು.
2. ಖಾಯಂ ಉದ್ಯೋಗವನ್ನು ನಿಗದಿತ ಅವಧಿಯ ಉದ್ಯೋಗವಾಗಿ ಪರಿವರ್ತನೆ.
3. ರಾಜ್ಯಗಳು 12 ಗಂಟೆಗಳ ಕೆಲಸಕ್ಕೆ ಅವಕಾಶ ನೀಡಬಹುದು. 300 ಕಾರ್ಮಿಕರಿಗಿಂತ ಕಡಿಮೆ ಇರುವ ಕಾರ್ಖಾನೆಗಳು ರಜೆ, ಅಮಾನತು ಹಾಗೂ ಸುರಕ್ಷತೆಯಲ್ಲಿ ಮೂಲಭೂತ ನಿಯಮವನ್ನು ಕಡೆಗಣಿಸಬಹುದು.
4. ಕೇವಲ 51% ಸದಸ್ಯರಿರುವ ಕಾರ್ಮಿಕರ ಸಂಘಗಳು ಮಾತ್ರ ಪ್ರತಿಭಟನೆ ಮಾಡಬಹುದು. ಇದರಿಂದ ಕಾರ್ಮಿಕರ ಧ್ವನಿ ಅಡಗಿಸಲಾಗುತ್ತಿದೆ.
ಈ ರೀತಿ ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ಕಾರ್ಮಿಕ ಕಾಯ್ದೆ ವಿರುದ್ಧ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಪ್ರಿಯಾಂಕ್ ಖರ್ಗೆ , ಕನಿಮೋಳಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಮಿಕ ಸಂಘಟನೆಗಳ ವಿರೋಧ: ಇನ್ನು ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳಲ್ಲಿ ಮಾಡಿರುವ ಕೆಲವೊಂದು ಪ್ರಮುಖ ಬದಲಾವಣೆಗಳಿಗೆ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.












Click it and Unblock the Notifications