3.86 ಕೋಟಿ ಜನ ನಿಗದಿತ ಸಮಯದಲ್ಲಿ 2ನೇ ಡೋಸ್ ಲಸಿಕೆ ಪಡೆದಿಲ್ಲ
ನವದೆಹಲಿ, ಆಗಸ್ಟ್ 19; ವ್ಯಾಕ್ಸಿನ್ ಕೊರತೆಯ ಕಾರಣ ಭಾರತದಲ್ಲಿ 3.86 ಕೋಟಿ ಜನರು ನಿಗದಿತ ಸಮಯದಲ್ಲಿ ಕೋವಿಡ್ 2ನೇ ಡೋಸ್ ಲಸಿಕೆ ಪಡೆದಿಲ್ಲ. ಇವುಗಳಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ಲಸಿಕೆ ಸೇರಿದೆ.
ಮಾಹಿತಿ ಹಕ್ಕು ಅಡಿ ಕೇಳಿದ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಿದಾಗ ಈ ಮಾಹಿತಿಯನ್ನು ನೀಡಿದೆ. ಎರಡನೇ ಡೋಸ್‌ಗೆ ನಿಗದಿಪಡಿಸಿದ ಸಮಯದಲ್ಲಿ 3.86 ಕೋಟಿ ಜನರು ಲಸಿಕೆಯನ್ನು ಪಡೆದಿಲ್ಲ.
ಗುರುವಾರ ಕೋವಿಡ್ ಪೋರ್ಟಲ್‌ನಲ್ಲಿನ ಮಾಹಿತಿಯಂತೆ ಇದುವರೆಗೂ ದೇಶದಲ್ಲಿ 44,22,85,854 ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. 12,59,07,443 ಜನರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ.

ಹೋರಾಟಗಾರ ರಮಣ್ ಶರ್ಮಾ ಮಾಹಿತಿ ಹಕ್ಕು ಕಾಯ್ದೆಯಡಿ ಮೊದಲ ಡೋಸ್ ಲಸಿಕೆಯನ್ನು ಎಷ್ಟು ಜನರು ಪಡೆದಿದ್ದಾರೆ? ಎಂಬ ಮಾಹಿತಿಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸುವಾಗ ಆರೋಗ್ಯ ಸಚಿವಾಲಯ 2ನೇ ಡೋಸ್ ಮಾಹಿತಿಯನ್ನು ನೀಡಿದೆ.
ಮೊದಲ ಡೋಸ್ ಕೋವಿಶೀಲ್ಡ್ ಪಡೆದವರು 84-112 ದಿನದೊಳಗೆ 2ನೇ ಡೋಸ್ ಪಡೆಯಬೇಕು. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರು 28-42 ದಿನಗಳಲ್ಲಿ 2ನೇ ಡೋಸ್ ಪಡೆಯಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಮೊದಲ ಡೋಸ್ ಕೋವಿಶೀಲ್ಡ್ ಪಡೆದವರು ನಿಗದಿತ ಸಮಯದಲ್ಲಿ 2ನೇ ಡೋಸ್ ಪಡೆದಿಲ್ಲ. ಸರ್ಕಾರ ನಿದಗಿಪಡಿಸಿದ ಸಮಯದಲ್ಲಿ ಜನರಿಗೆ ತೆಗೆದುಕೊಳ್ಳಲು ವ್ಯಾಕ್ಸಿನ್ ಸಿಕ್ಕಿಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ನಿಗದಿತ ಸಮಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಪಡೆಯಲು ವಿಫಲವಾದರೆ ಮತ್ತೆ ಮೊದಲ ಡೋಸ್ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೋವಿಡ್‌ನಿಂದ ಪೂರ್ಣ ರಕ್ಷಣೆಗಾಗಿ ಜನರು 2 ಡೋಸ್ ಲಸಿಕೆಯನ್ನು ಪಡೆಯಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡು ಲಸಿಕೆಗಳಿಗೂ ಸಹ ಇದು ಅನ್ವಯವಾಗಲಿದೆ ಎಂದು ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್ ಲಸಿಕೆ ನೀಡುವ ವೇಗ ಹೆಚ್ಚಿಸಲು ಪ್ರಯತ್ನಗಳನ್ನು ನಡೆಸುತ್ತಿದೆ. 2021ರ ಜೂನ್ 21ರಿಂದ ಲಸಿಕಾರಣ ಚುರುಕುಗೊಳಿಸಲಾಗಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವೇ ಲಸಿಕೆಯನ್ನು ಪೂರೈಕೆ ಮಾಡುತ್ತಿದೆ.
ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಕೆ ಮಾಡುವ ಮೂಲಕ ಲಸಿಕಾರಕಣ ಅಭಿಯಾನಕ್ಕೆ ಬೆಂಬಲ ನೀಡುತ್ತಿದೆ. ಸರ್ಕಾರ ಲಸಿಕೆ ಉತ್ಪಾದಕರಿಂದ ಲಸಿಕೆ ಖರೀದಿಸಿ ಮತ್ತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.
ಭಾರತ ಸರ್ಕಾರದ ಹೊಸ ಸಾರ್ವತ್ರೀಕರಣದ ಕೋವಿಡ್ ಲಸಿಕೆ ಅಭಿಯಾನದಡಿ ಕೇಂದ್ರ ಸರ್ಕಾರ ದೇಶದ ಲಸಿಕೆ ಉತ್ಪಾದಕರಿಂದ ಶೇ 75ರಷ್ಟು ಲಸಿಕೆಯನ್ನು ಖರೀದಿಸುತ್ತಿದೆ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿದೆ.
ಖಾಸಗಿ ಆಸ್ಪತ್ರೆಗಳು ಸಹ ಲಸಿಕೆಯನ್ನು ಖರೀದಿ ಮಾಡಿ ಜನರಿಗೆ ನೀಡಲು ಕೇಂದ್ರ ಸರ್ಕಾರ ಅವಕಾಶವನ್ನು ನೀಡಿದೆ. ಆದರೆ ಸರಿಯಾದ ಸಮಯಕ್ಕೆ ಜನರಿಗೆ ಲಸಿಕೆ ಸಿಗುತ್ತಿಲ್ಲ. ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕೆಯ ಕೊರತೆ ಇದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಉಂಟಾಗಿದೆ. ಆಗಸ್ಟ್ 19, 20ರಂದು ರಾಜ್ಯದ ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡುವುದಿಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ. ಕೇಂದ್ರದಿಂದ ಲಸಿಕೆ ಪೂರೈಕೆಯಾದ ಬಳಿಕ ಪುನಃ ಲಸಿಕೆಯನ್ನು ನೀಡಲಾಗುತ್ತದೆ.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಹೊರತುಪಡಿಸಿ ಕೇಂದ್ರ ಸರ್ಕಾರ ಪ್ರಮುಖ ಅಂತರರಾಷ್ಟ್ರೀಯ ಲಸಿಕೆ ತಯಾರಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಫೈಜರ್, ಜೆ&ಜೆ ಮತ್ತು ಮಾಡರ್ನಾ ಕಂಪನಿಗಳ ಜೊತೆ ಅನೇಕ ಸುತ್ತಿನ ಚರ್ಚೆಗಳು ನಡೆದಿವೆ. ಅವುಗಳನ್ನು ಭಾರತದಲ್ಲಿ ಪೂರೈಸಲು ಅಥವಾ ತಯಾರಿಸಲು ಸರ್ಕಾರ ಸಹಾಯವನ್ನು ನೀಡಲಿದೆ.
ಕೇಂದ್ರ ಸರ್ಕಾರ ಹೆಚ್ಚು ಲಸಿಕೆಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ ಕಂಪನಿಗಳಿಗೆ ಸಹಕಾರವನ್ನು ನೀಡಿದೆ. ಭಾರತ್ ಬಯೋಟೆಕ್‌ನ ಸ್ವಂತ ಉತ್ಪಾದನಾ ಘಟಕಗಳನ್ನು 1ರಿಂದ 4ಕ್ಕೆ ಹೆಚ್ಚಿಸಲಾಗಿದ್ದು, ಜೊತೆಗೆ ಇತರ 3 ಕಂಪನಿ / ಸ್ಥಾವರಗಳಲ್ಲೂ ಕೊವಾಕ್ಸಿನ್ ಉತ್ಪಾದನೆಯಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಮೂರು ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ಒಟ್ಟಾಗಿ ಡಿಸೆಂಬರ್ ವೇಳೆಗೆ 4.0 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿವೆ. ಡಾ. ರೆಡ್ಡಿಸ್ ಸಂಸ್ಥೆಯ ಸಹಯೋಗದಲ್ಲಿ 6 ಕಂಪನಿಗಳು ರಷ್ಯಾದ ಜತೆ ಪಾಲುದಾರಿಕೆಯೊಂದಿಗೆ ʻಸ್ಪುಟ್ನಿಕ್ʼ ಲಸಿಕೆಯನ್ನು ತಯಾರಿಸಲು ಭಾರತ ಸರ್ಕಾರ ಸಹಕಾರ ಕೊಟ್ಟಿದೆ.
ಮಕ್ಕಳಿಗೆ ಕೋವಿಸ್ ಲಸಿಕೆ; ಪ್ರಸ್ತುತ ಭಾರತದಲ್ಲಿ ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ. ಮಕ್ಕಳಿಗೆ ಲಸಿಕೆ ಹಾಕುವುದರ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿವೆ ಮತ್ತು ಅವು ಪ್ರೋತ್ಸಾಹದಾಯಕವಾಗಿವೆ. ಭಾರತದಲ್ಲಿ ಮಕ್ಕಳ ಮೇಲೆ ಪ್ರಯೋಗಗಳು ನಡೆಯುತ್ತಿವೆ. ಮಕ್ಕಳ ಲಸಿಕೆ ಕುರಿತು ವಾಟ್ಸ್ ಅಪ್ ಗ್ರೂಪ್‌ಗಳಲ್ಲಿ ಬರುವ ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಲಾಗಿದೆ.
ಭಾರತದಲ್ಲಿ 1ನೇ ಹಂತದ ರಾಷ್ಟ್ರೀಯ ಕೋವಿಡ್ ಅಭಿಯಾನ 2021ರ ಜನವರಿ 16ರಿಂದ ಆರಂಭವಾಯಿತು. ಮೊದಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗಿತ್ತು. 2020ರ ಮಾರ್ಚ್ 1 ರಿಂದ ಎರಡನೇ ಹಂತದ ಅಭಿಯಾನ ಆರಂಭಿಸಲಾಯಿತು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆದ್ಯತೆ ಕೊಡಲಾಯಿತು.












Click it and Unblock the Notifications