‘ಆಪರೇಷನ್ ಕಾವೇರಿ’ ಮೂಲಕ ತಾಯ್ನಾಡಿಗೆ ಬಂದ ಭಾರತೀಯರು
ಮುಂಬೈ: ಸುಡುಗಾಡಿನ ಪ್ರತಿರೂಪವಾಗಿರುವ ಸುಡಾನ್ ನೆಲದಿಂದ ಸಾವಿರಾರು ಭಾರತೀಯರನ್ನು ರಕ್ಷಣೆ ಮಾಡಿ ತರುವ ಕಾರ್ಯ ಮುಂದುವರಿದಿದೆ. 'ಆಪರೇಷನ್ ಕಾವೇರಿ' ಮೂಲಕ 2ನೇ ಬ್ಯಾಚ್‌ನಲ್ಲಿ 246 ಭಾರತೀಯರಿದ್ದ ಸೇನಾ ವಿಮಾನ ಮುಂಬೈ ತಲುಪಿದೆ. ಈ ಮೂಲಕ ಸಂಕಷ್ಟದಲ್ಲಿ ನರಳುತ್ತಿದ್ದ ಭಾರತೀಯರಿಗೆ ಬಿಗ್ ರಿಲೀಸ್ ಸಿಕ್ಕಂತಾಗಿದೆ.
ಸುಡಾನ್ ದೇಶಕ್ಕೆ ಹೊಟ್ಟೆಪಾಡಿಗೆ ವಲಸೆ ಹೋಗಿದ್ದ ಭಾರತೀಯರು ಪರದಾಡಿದ್ದರು. ಏಪ್ರಿಲ್ 15ರ ತನಕ ಅಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಏಪ್ರಿಲ್ 15ರ ಮಧ್ಯಾಹ್ನ ಶುರುವಾಯಿತು ನೋಡಿ ದಿಢೀರ್ ದಂಗೆ. ಸುಡಾನ್ ಸೇನೆ ವಿರುದ್ಧ ಅಲ್ಲಿನ ಅರೆಸೇನಾ ಪಡೆ ಸೈನಿಕರು ಹಿಂಸಾಚಾರ ಆರಂಭಿಸಿದರು. ಅಲ್ಲಿಂದ ಮುಂದೆ ನೂರಾರು ಹೆಣಗಳು ಬೀದಿಯಲ್ಲೇ ಬಿದ್ದವು. ಸಾವಿರಾರು ಜನ ಕೈಕಾಲು ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇಂತಹ ದೇಶದಲ್ಲಿ ನರಳುತ್ತಿದ್ದ ಭಾರತೀಯರನ್ನ ರಕ್ಷಿಸಿ ಕರೆತರಲಾಗುತ್ತಿದೆ.

ಈಗಾಗಲೇ ಮೊದಲನೇ ಬ್ಯಾಚ್‌ನಲ್ಲಿ ಭಾರತೀಯರು ತಾಯ್ನಾಡು ತಲುಪಿದ್ದಾರೆ. ಇದೀಗ 2ನೇ ಬ್ಯಾಚ್‌ನಲ್ಲಿ 246 ಭಾರತೀಯರು ಇದ್ದ ಸೇನಾ ವಿಮಾನ ಮುಂಬೈ ತಲುಪಿದೆ. ಸದ್ಯ ಭಾರತ ತಲುಪಿದವರಲ್ಲಿ ಕರ್ನಾಟಕ ಮೂಲದ ಪ್ರಜೆಗಳು ಇದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಇನ್ನಷ್ಟು ಪ್ರಜೆಗಳನ್ನು ಸುಡಾನ್ ನೆಲದಿಂದ ನಮ್ಮ ದೇಶಕ್ಕೆ ಕರೆತರಲು ಸೇನೆ ಕಾರ್ಯಾಚರಣೆ ನಡೆಸುತ್ತಿದೆ. 72 ಗಂಟೆ ಕಾಲ ಕದನ ವಿರಾಮ ಘೊಷಣೆಯಾದ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾರ್ಯಾಚರಣೆ ಮುಗಿಸಬೇಕಿದೆ. ಇಲ್ಲವಾದರೆ ಮತ್ತೆ ಹಿಂಸೆ ಶುರುವಾಗಿ ಸಮಸ್ಯೆಯಾಗುತ್ತದೆ.
ಕನ್ನಡಿಗರ ಜೀವನದಿ ಹೆಸರು!
ಹೌದು, ಕನ್ನಡಿಗರ ಜೀವನದಿ ಹೆಸರನ್ನು ಸುಡಾನ್ ಕಾರ್ಯಾಚರಣೆ ಇಡಲಾಗಿದೆ. 'ಆಪರೇಷನ್ ಕಾವೇರಿ' ಹೆಸರಲ್ಲಿ ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಸುಡಾನ್ ನೆಲದಲ್ಲಿ ಪರದಾಡಿದ್ದ ಹಕ್ಕಿಪಿಕ್ಕಿ ಜನರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಬಹುತೇಕ ವಿದೇಶಿಗರು ಸುಡಾನ್ ನೆಲದಿಂದ ಹೊರಟಿದ್ದಾರೆ. ಆದರೆ ಸುಡಾನ್ ಹಿಂಸಾಚಾರಕ್ಕೆ ರಕ್ತದಾಹ ಮಾತ್ರ ಕಡಿಮೆಯಾಗಿಲ್ಲ, ಹೀಗಾಗಿ ಇನ್ನೊಂದು ರೌಂಡ್ ಹಿಂಸಾಚಾರ ಆರಂಭಿಸಲು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಸಜ್ಜಾಗಿದೆ.
ಬೀದಿಗೆ ಬಿದ್ದ ತುಂಬು ಗರ್ಭಿಣಿಯರು
ಇದಿಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರದ ವರದಿ ಪ್ರಕಾರ ಸುಡಾನ್ ಹಿಂಸಾಚಾರ ಆರಂಭವಾದ ನಂತರ 11 ಲಕ್ಷ ಬೀದಿಗೆ ಬಿದ್ದಿದ್ದಾರೆ. ಹೀಗೆ ಮನೆ ಕಳೆದುಕೊಂಡು ನರಳುತ್ತಿರುವ ನಿರಾಶ್ರಿತರ ಪೈಕಿ 24 ಸಾವಿರ ಗರ್ಭಿಣಿಯರು ಕೂಡ ಸೇರಿದ್ದಾರಂತೆ. ಇವರಿಗೆಲ್ಲಾ ಮುಂದಿನ ವಾರದಲ್ಲಿ ಹೆರಿಗೆ ಆಗುವುದಿದೆ ಎಂದಿದೆ ವರದಿ. ಸುಡಾನ್ ದೇಶಾದ್ಯಂತ ಒಟ್ಟು 2,19,000 ಗರ್ಭಿಣಿಯರಿದ್ದಾರೆ. ಆದರೆ ಸೇನಾ ಪಡೆ, ಅರೆಸೇನಾ ಪಡೆ ಹುಚ್ಚಾಟದಲ್ಲಿ ತುಂಬು ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬಿದ್ದಂತಾಗಿದೆ.

ಆಸ್ಪತ್ರೆಗಳು ತೆರೆದಿಲ್ಲ, ರೋಗಿಗಳ ನರಳಾಟ
ಸುಡಾನ್ ಪರಿಸ್ಥಿತಿ ನೋಡುತ್ತಿದ್ದರೆ ಅಕ್ಷರಶಃ ನರಕವೇ ಕಣ್ಣಮುಂದೆ ಬರುತ್ತದೆ. ಅದರಲ್ಲೂ ಸುಡಾನ್ ರಾಜಧಾನಿ ಖರ್ಟೋಮ್ ಸಂಪೂರ್ಣ ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶೇ. 60ರಷ್ಟು ಆಸ್ಪತ್ರೆಗಳು ಮುಚ್ಚಿವೆ. ಇನ್ನು ರೋಗಿಗಳು ಏನು ಮಾಡಬೇಕು ಹೇಳಿ? ಉಳಿದಿರುವ ಶೇ. 16ರಷ್ಟು ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೂಡ ಸಿಗದೆ ಹಲವರು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಇದು ವಿಶ್ವ ಸಮುದಾಯದ ನಿದ್ದೆಗೆಡಿಸಿದೆ.
ಒಟ್ನಲ್ಲಿ ಸುಡಾನ್‌ಗೆ ಅಲ್ಲಿನ ಸೇನೆ ಮತ್ತು ಅರೆಸೇನಾ ಪಡೆ ಜಗಳ ಒಂದು ಗತಿ ಕಾಣಿಸೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿದೆ. ತಮ್ಮ ಪ್ರಜೆಗಳಿಗೆ ತಿನ್ನಲು ಅನ್ನವಿಲ್ಲ ಅಂದರೂ ಅಲ್ಲಿನ ನಾಯಕರ ಶೋಕಿಗೆ ಒಂದಿಷ್ಟೂ ಕೊರತೆ ಇಲ್ಲ. ಗನ್, ಬಾಂಬ್ ದಾಳಿ ಮಾಡಿಸುತ್ತಿರುವ ಎರಡೂ ಬಣಗಳು ಅಮಾಯಕರನ್ನು ಬಲಿಪಡೆಯುತ್ತಿವೆ. ವಿಶ್ವಸಂಸ್ಥೆ ಸುಡಾನ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications