2ಜಿ ಸ್ಪೆಕ್ಟ್ರಂ ಹಗರಣ: ಅಕ್ಟೋಬರ್ 5ರಿಂದ ಪ್ರತಿದಿನ ವಿಚಾರಣೆ
ನವದೆಹಲಿ, ಸೆ. 30: ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಖುಲಾಸೆ ಪ್ರಶ್ನಿಸಿ ಸಿಬಿಐ, ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ. ಅಕ್ಟೋಬರ್ 05ರಿಂದ ಪ್ರತಿ ದಿನ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.
ಈ ಪ್ರಕರಣದ ಎಲ್ಲಾ 19 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಖುಲಾಸೆ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ಈ ಮೇಲ್ಮನವಿ ಅರ್ಜಿಯ ವಿಚಾರಣೆ ಕುರಿತಂತೆ ಪ್ರಮುಖ ಆರೋಪಿ ಎ ರಾಜಾ ಸೇರಿದಂತೆ ಹಲವರಿಗೆ ಈಗಾಗಲೇ ದೆಹಲಿ ಹೈಕೋರ್ಟ್ ಜಸ್ಟೀಸ್ ಬ್ರಿಜೇಶ್ ಸೇಠಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.
''ಜನವರಿ 15ಕ್ಕೆ ನಡೆಯಬೇಕಿದ್ದ ವಿಚಾರಣೆಯು ಕೊವಿಡ್ 19ರ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನವೆಂಬರ್ 30, 2020ರಂದು ಜಡ್ಜ್ ಬ್ರಿಜೇಶ್ ಸೇಠಿ ನಿವೃತ್ತಿ ಹೊಂದುತ್ತಿದ್ದು, ಅಷ್ಟರೊಳಗೆ ಪ್ರಕರಣದ ವಿಚಾರಣೆ ಮುಗಿಸುವ ಸಾಧ್ಯತೆಯಿದೆ. ಹೊಸ ನ್ಯಾಯಪೀಠದ ಮೂಲಕ ಮತ್ತೊಮ್ಮೆ ಎಲ್ಲಾ ಕಾನೂನು ಪ್ರಕ್ರಿಯೆ ನಡೆಸಬೇಕಾದರೆ ಸಾರ್ವಜನಿಕರ ಹಣವನ್ನು ಪೋಲು ಮಾಡಿದಂತಾಗುತ್ತದೆ'' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

2014ರಲ್ಲಿ ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ನಡೆದಿದ್ದ 30 ಸಾವಿರ ಕೋಟಿ ರೂ. ಹಗರಣದ ಪ್ರಮುಖ ಆರೋಪಿಗಳಾಗಿದ್ದ ಮಾಜಿ ಸಚಿವ ಎ.ರಾಜಾ, ಕರಣಾನಿಧಿ ಅವರ ಪುತ್ರಿ, ಸಂಸದೆ ಕನ್ನಿಮೊಳಿ ಸೇರಿದಂತೆ ಒಟ್ಟು 19 ಆರೋಪಿಗಳನ್ನು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಒಪಿ ಸೈನಿ ಖುಲಾಸೆಗೊಳಿಸಿ, ಆದೇಶ ನೀಡಿದ್ದರು.
2ಜಿ (ಸೆಕೆಂಡ್ ಜನರೇಶನ್ ದೂರಸಂಪರ್ಕ ಸೇವೆ) ಮೊಬೈಲ್ ಸೇವೆಗೆ 2008 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ 9 ದೂರಸಂಪರ್ಕ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಪ್ರಕರಣ ಇದು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕಾದ ನಷ್ಟ, ಒಂದೆರಡಲ್ಲ,1,76,000 ಕೋಟಿ ರೂಪಾಯಿ. ಆಗಿನ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರ ಮೇಲೆ ಆರೋಪ ಕೇಳಿಬಂದಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರತಿಪಕ್ಷಗಳು, ಕಾಂಗ್ರೆಸ್ ಅನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಪ್ರಕರಣದಲ್ಲಿ ಹಲವರ ತಲೆದಂಡವೂ ಆಗಿತ್ತು.












Click it and Unblock the Notifications