ದೇಶದಲ್ಲಿ ಒಂದು ಕೋಟಿ ದಾಟಿದ ಕೋವಿಡ್ ಚೇತರಿಕೆ ಸಂಖ್ಯೆ
ನವದೆಹಲಿ, ಜನವರಿ 7: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20,346 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಕಳೆದ ಎರಡು ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಏರಿಕೆಯಾದಂತಾಗಿದೆ. ಬಹು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ಸೋಂಕಿತರ ಸಂಖ್ಯೆಯು, ದೈನಂದಿನ ಸೋಂಕಿತರ ಒಟ್ಟು ಸಂಖ್ಯೆಗಿಂತ ಕಡಿಮೆ ದಾಖಲಾಗಿದೆ. ಜತೆಗೆ ಇದುವರೆಗೂ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆಯು ಬಿಡುಗಡೆಯಾದವರ ಸಂಖ್ಯೆಗಿಂತ ಸುಮಾರು 700ರಷ್ಟು ಹೆಚ್ಚು ದಾಖಲಾಗಿದೆ. 19,587 ಮಂದಿ ಬುಧವಾರ ಬಿಡುಗಡೆಯಾಗಿದ್ದಾರೆ. 222 ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,03,95,278ಕ್ಕೆ ತಲುಪಿದೆ. ಇದರಲ್ಲಿ 2,28,083 ಸಕ್ರಿಯ ಪ್ರಕರಣಗಳಿವೆ. ಒಟ್ಟು 1,00,16,859 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇದುವರೆಗೂ 1,50,336 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ದೇಶದಲ್ಲಿ ಇದುವರೆಗೂ 17,84,00,995 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 9,37,590 ಮಾದರಿಗಳನ್ನು ಜನವರಿ 6ರಂದು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ದೇಶದಾದ್ಯಂತ ಶುಕ್ರವಾರ ಮತ್ತೊಂದು ಸುತ್ತಿನ ಬೃಹತ್ ಪ್ರಮಾಣದ ಕೋವಿಡ್ ಲಸಿಕೆ ಅಣಕು ಪ್ರದರ್ಶನ ಅಭ್ಯಾಸ ನಡೆಯಲಿದೆ. ಅದಕ್ಕಾಗಿ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಆರೋಗ್ಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.












Click it and Unblock the Notifications