ವಿಹಾರ ತಂದ ಆಪತ್ತು: ದೋಣಿ ಮುಳುಗಿ 12 ಮಕ್ಕಳು ಸೇರಿದಂತೆ 2 ಶಿಕ್ಷಕರು ಸಾವು!
ವಿಹಾರಕ್ಕೆಂದು ತೆರಳಿದ್ದ ಶಿಕ್ಷಕರು ಹಾಗೂ ಮಕ್ಕಳು ದೋಣಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ.
ಕಳೆದ ದಿನ ಹರ್ನಿ ಸರೋವರದಲ್ಲಿ ದೋಣಿ ಮುಳುಗಿ ವಿಹಾರಕ್ಕೆ ತೆರಳಿದ್ದ 12 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಸೇರಿದಂತೆ ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ. ದೋಣಿಯಲ್ಲಿ ಖಾಸಗಿ ಶಾಲೆಯ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು, ಅವರಲ್ಲಿ ಯಾರೂ ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ ಎಂದು ವರದಿಯಾಗಿದೆ.

ವಿಹಾರಕ್ಕೆಂದು ಇಲ್ಲಿಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಹರ್ನಿ ಸರೋವರದಲ್ಲಿ ಪಲ್ಟಿಯಾಗಿದೆ. ಘಟನೆಯ ನಂತರ ಅಗ್ನಿಶಾಮಕ ದಳ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದೆ. ಅಗ್ನಿಶಾಮಕ ದಳ ಇದುವರೆಗೆ ಏಳು ವಿದ್ಯಾರ್ಥಿಗಳನ್ನು ರಕ್ಷಿಸಿದೆ. ನಾಪತ್ತೆಯಾದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ವಡೋದರದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ತಿಳಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಇನ್ನೂ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ವಡೋದರಾಗೆ ತೆರಳುವುದಾಗಿ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಮತ್ತು ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡಲಿದೆ ಎಂದು ಅವರು ಘೋಷಿಸಿದ್ದಾರೆ.
ವಡೋದರಾ ಶಾಸಕ ಶೈಲೇಶ್ ಮೆಹ್ತಾ, "ಇದು ಬೋಟ್ ಗುತ್ತಿಗೆದಾರರ ತಪ್ಪಾಗಿದೆ, ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಇದ್ದರು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರವನ್ನು ಕೋರಲಾಗುವುದು" ಎಂದು ಹೇಳಿದರು.












Click it and Unblock the Notifications