ಸುಡಾನ್ ನೆಲದಲ್ಲಿ ‘ಆಪರೇಷನ್ ಕಾವೇರಿ’ ಸಕ್ಸಸ್!
ನವದೆಹಲಿ: ಸುಡಾನ್ ನೆಲದಿಂದ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. 10ನೇ ತಂಡ ವಾಯುಪಡೆ ವಿಮಾನದ ಮೂಲಕ ತಾಯ್ನಾಡಿನತ್ತ ಪ್ರಯಾಣ ಬೆಳೆಸಿದ್ದು, 135 ಮಂದಿ ಭಾರತೀಯರು 10ನೇ ತಂಡದಲ್ಲಿ ಬಂದಿಳಿಯಲಿದ್ದಾರೆ. ಮತ್ತೊಂದು ಕಡೆ ಸುಡಾನ್‌ನಲ್ಲಿ (Sudan) ಸಿಲುಕಿರುವ ಮತ್ತಷ್ಟು ಭಾರತೀಯರ ರಕ್ಷಣೆಗೆ ಸೇನೆ ಕಾರ್ಯಾಚರಣೆ ಮುಂದುವರಿಸಿದೆ.
ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ ಬ್ರೇಕ್ ಬಿದ್ದಿದೆ. 72 ಗಂಟೆ ಕಾಲ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ಇದೇ ಸಮಯದಲ್ಲಿ ವಿದೇಶಿಯರನ್ನ ರಕ್ಷಿಸುವ ಕಾರ್ಯ ವೇಗವಾಗಿ ಸಾಗಿದೆ. ಭಾರತ ಮೂಲದ ಸಾವಿರಾರು ಪ್ರಜೆಗಳು ಸುಡಾನ್‌ನಲ್ಲಿ ಸಿಲುಕಿದ್ದರು ಎನ್ನಲಾಗಿತ್ತು. ಈ ಪೈಕಿ ಬಹುತೇಕರನ್ನ ಭಾರತೀಯ ಸೇನೆ ಈಗಾಗಲೇ ರಕ್ಷಣೆ ಮಾಡಿದ್ದು, ಸೌದಿ ಅರೇಬಿಯಾದ ಜಿದ್ದಾ ಮೂಲಕ ರಕ್ಷಿಸಿ ಭಾರತಕ್ಕೆ ಕರೆತರಲಾಗುತ್ತಿದೆ.

ಸೌದಿ ಮೂಲಕ ರಕ್ಷಣಾ ಕಾರ್ಯ
ಇನ್ನು ಭಾರತದ ರಕ್ಷಣಾ ಕಾರ್ಯಕ್ಕೆ ನಮ್ಮ ದೇಶದ ಮಿತ್ರ ಸೌದಿ ಅರೇಬಿಯಾ ನೆರವಾಗುತ್ತಿದೆ. ಹೇಗೆಂದರೆ ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿದೆ. ಹೀಗಾಗಿ ಸೌದಿ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. ಈಗಾಗಲೇ ಸಾವಿರಾರು ಭಾರತೀಯರು ಸೌದಿ ತಲುಪಿ, ಅಲ್ಲಿಂದ ಭಾರತಕ್ಕೆ ಬರುತ್ತಿದ್ದಾರೆ.
ಭಾರತೀಯರ ರಕ್ಷಣೆಗೆ ವಿಶೇಷ ಕ್ರಮ
ಈಗಾಗಲೇ 9 ಬ್ಯಾಚ್‌ನಲ್ಲಿ ಭಾರತೀಯರು ತಾಯ್ನಾಡು ತಲುಪಿದ್ದಾರೆ. ಇದೀಗ 10ನೇ ಬ್ಯಾಚ್‌ನಲ್ಲಿ 135 ಭಾರತೀಯರು ಇರುವ ಸೇನಾ ವಿಮಾನ ಭಾರತ ತಲುಪಲಿದೆ. ಸದ್ಯ ಭಾರತ ತಲುಪಿದವರಲ್ಲಿ ಕರ್ನಾಟಕ ಮೂಲದ ಪ್ರಜೆಗಳು ಇದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಇನ್ನಷ್ಟು ಪ್ರಜೆಗಳನ್ನು ಸುಡಾನ್ ನೆಲದಿಂದ ದೇಶಕ್ಕೆ ಕರೆತರಲು ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಬೇರೆ ಬೇರೆ ದೇಶಗಳು ಕೂಡ ಭಾರತೀಯರ ನೆರವಿಗೆ ಬಂದಿದ್ದವು. ಕೇಂದ್ರ ಸರ್ಕಾರ ವಿಶೇಷ ಪಡೆ ನೇಮಕ ಮಾಡಿ ಭಾರತೀಯರನ್ನ ರಕ್ಷಿಸಿ ಕರೆತಂದಿದೆ.
ಸುಡಾನ್ ನೆಲದಲ್ಲಿ ಏನಾಗಿತ್ತು?
ಸುಡಾನ್ ದೇಶಕ್ಕೆ ಹೊಟ್ಟೆಪಾಡಿಗೆ ವಲಸೆ ಹೋಗಿದ್ದ ಭಾರತೀಯರು ಪರದಾಡಿದ್ದರು. ಏಪ್ರಿಲ್ 15ರ ತನಕ ಅಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಏಪ್ರಿಲ್ 15ರ ಮಧ್ಯಾಹ್ನ ಶುರುವಾಯಿತು ನೋಡಿ ದಿಢೀರ್ ದಂಗೆ. ಸುಡಾನ್ ಸೇನೆ ವಿರುದ್ಧ ಅಲ್ಲಿನ ಅರೆಸೇನಾ ಪಡೆ ಸೈನಿಕರು ಹಿಂಸಾಚಾರ ಆರಂಭಿಸಿದರು. ಅಲ್ಲಿಂದ ಮುಂದೆ ನೂರಾರು ಹೆಣಗಳು ಬೀದಿಯಲ್ಲೇ ಬಿದ್ದವು. ಸಾವಿರಾರು ಜನ ಕೈಕಾಲು ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇಂತಹ ದೇಶದಲ್ಲಿ ನರಳುತ್ತಿದ್ದ ಭಾರತೀಯರನ್ನ ರಕ್ಷಿಸಿ ಕರೆತರಲಾಗುತ್ತಿದೆ.
ಕನ್ನಡಿಗರ ಜೀವನದಿ ಹೆಸರು!
ಹೌದು, ಕನ್ನಡಿಗರ ಜೀವನದಿ ಹೆಸರನ್ನು ಸುಡಾನ್ ಕಾರ್ಯಾಚರಣೆ ಇಡಲಾಗಿದೆ. 'ಆಪರೇಷನ್ ಕಾವೇರಿ' ಹೆಸರಲ್ಲಿ ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಸುಡಾನ್ ನೆಲದಲ್ಲಿ ಪರದಾಡಿದ್ದ ಹಕ್ಕಿಪಿಕ್ಕಿ ಜನರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಬಹುತೇಕ ವಿದೇಶಿಗರು ಸುಡಾನ್ ನೆಲದಿಂದ ಹೊರಟಿದ್ದಾರೆ. ಆದರೆ ಸುಡಾನ್ ಹಿಂಸಾಚಾರಕ್ಕೆ ರಕ್ತದಾಹ ಮಾತ್ರ ಕಡಿಮೆಯಾಗಿಲ್ಲ, ಹೀಗಾಗಿ ಇನ್ನೊಂದು ರೌಂಡ್ ಹಿಂಸಾಚಾರ ಆರಂಭಿಸಲು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಸಜ್ಜಾಗಿದೆ.
ಬೀದಿಗೆ ಬಿದ್ದ ತುಂಬು ಗರ್ಭಿಣಿಯರು
ಇದಿಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರದ ವರದಿ ಪ್ರಕಾರ ಸುಡಾನ್ ಹಿಂಸಾಚಾರ ಆರಂಭವಾದ ನಂತರ 11 ಲಕ್ಷ ಬೀದಿಗೆ ಬಿದ್ದಿದ್ದಾರೆ. ಹೀಗೆ ಮನೆ ಕಳೆದುಕೊಂಡು ನರಳುತ್ತಿರುವ ನಿರಾಶ್ರಿತರ ಪೈಕಿ 24 ಸಾವಿರ ಗರ್ಭಿಣಿಯರು ಕೂಡ ಸೇರಿದ್ದಾರಂತೆ. ಇವರಿಗೆಲ್ಲಾ ಮುಂದಿನ ವಾರದಲ್ಲಿ ಹೆರಿಗೆ ಆಗುವುದಿದೆ ಎಂದಿದೆ ವರದಿ. ಸುಡಾನ್ ದೇಶಾದ್ಯಂತ ಒಟ್ಟು 2,19,000 ಗರ್ಭಿಣಿಯರಿದ್ದಾರೆ. ಆದರೆ ಸೇನಾ ಪಡೆ, ಅರೆಸೇನಾ ಪಡೆ ಹುಚ್ಚಾಟದಲ್ಲಿ ತುಂಬು ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬಿದ್ದಂತಾಗಿದೆ.
ಒಟ್ನಲ್ಲಿ ಸುಡಾನ್‌ಗೆ ಅಲ್ಲಿನ ಸೇನೆ ಮತ್ತು ಅರೆಸೇನಾ ಪಡೆ ಜಗಳ ಒಂದು ಗತಿ ಕಾಣಿಸೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿದೆ. ತಮ್ಮ ಪ್ರಜೆಗಳಿಗೆ ತಿನ್ನಲು ಅನ್ನವಿಲ್ಲ ಅಂದರೂ ಅಲ್ಲಿನ ನಾಯಕರ ಶೋಕಿಗೆ ಒಂದಿಷ್ಟೂ ಕೊರತೆ ಇಲ್ಲ. ಗನ್, ಬಾಂಬ್ ದಾಳಿ ಮಾಡಿಸುತ್ತಿರುವ ಎರಡೂ ಬಣಗಳು ಅಮಾಯಕರನ್ನು ಬಲಿಪಡೆಯುತ್ತಿವೆ. ವಿಶ್ವಸಂಸ್ಥೆ ಸುಡಾನ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications