ರಾಜಕೀಯ ಮಾಡುವವರು ಚುನಾವಣೆಗೆ ಸ್ಪರ್ಧಿಸಲಿ ಜೆಎನ್‌ಯುಗೆ ಬರುವುದು ಬೇಡ: ಉಪಕುಲಪತಿ
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) 90 ಪ್ರತಿಶತ ವಿದ್ಯಾರ್ಥಿಗಳು ರಾಜಕೀಯದಿಂದ ದೂರವಿದ್ದಾರೆ ಆದರೆ ಕೇವಲ 10 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ರಾಜಕೀಯದಿಂದ ಇಡೀ ವಿಶ್ವ ವಿದ್ಯಾಲಯಕ್ಕೆ ತೊಂದರೆಯಾಗಿದೆ ಎಂದು ಉಪಕುಲಪತಿ ಶಾಂತಿಶ್ರೀ ಧೂಲಿಪುಡಿ ಪಂಡಿತ್ ಬುಧವಾರ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಪಂಡಿತ್, ಇತ್ತೀಚಿನ ದಿನಗಳಲ್ಲಿ ಜೆಎನ್‌ಯುನಲ್ಲಿ ನಡೆದ ಘರ್ಷಣೆಗಳ ಬಗ್ಗೆ ಕೇಳಿದಾಗ, ಇದು ರಾಜಕೀಯವಾಗಿ ಸಕ್ರಿಯ ಕ್ಯಾಂಪಸ್ ಆದರೆ ವಿಶ್ವವಿದ್ಯಾಲಯವು ಹಿಂಸಾಚಾರದ ಸ್ಥಳವಲ್ಲ ಮತ್ತು ರಾಜಕಾರಣಿಯಾಗಲು ಬಯಸುವವರು ಹೊರಗೆ ಹೋಗಿ ಚುನಾವಣೆಯಲ್ಲಿ ಹೋರಾಡಲಿ ಎಂದು ಹೇಳಿದರು.
"ಶೇಕಡ ತೊಂಬತ್ತರಷ್ಟು ವಿದ್ಯಾರ್ಥಿಗಳು ರಾಜಕೀಯದಿಂದ ದೂರವುಳಿದು, ಅಧ್ಯಯನದ ಕಡೆ ಗಮನ ಹರಿಸುತ್ತಾರೆ. ಆದರೆ ಉಳಿದ ಶೇಕಡಾ 10ರಷ್ಟು ಮಂದಿ ಮಾತ್ರ ತೊಂದರೆ ಕೊಡುವವರಾಗಿದ್ದಾರೆ, ಜೆಎನ್‌ಯುನಲ್ಲಿ ತಮ್ಮ ರಾಜಕೀಯ ಜೀವನ ಕಟ್ಟಬಹುದು ಎಂದು ಅವರು ಭಾವಿಸುತ್ತಾರೆ" ಎಂದು ಅವರು ಹೇಳಿದ್ದಾರೆ.
"ಜೆಎನ್‌ಯು ರಾಜಕೀಯ ವೃತ್ತಿಜೀವನದ ಸ್ಮಶಾನವಾಗಿದೆ. ಕಳೆದ ಬಾರಿ ಏನಾಯಿತು ಎಂದು ನಿಮಗೆ ತಿಳಿದಿದೆ, ಅಂತಹ ರಾಜಕೀಯ ಮಾಡಿದವರೆಲ್ಲರೂ ಜೈಲಿನಲ್ಲಿದ್ದಾರೆ" ಎಂದು ಪಂಡಿತ್ ಹೇಳಿದರು.

ಕಾಲೇಜು ರಾಜಕೀಯ ಅಖಾಡವಲ್ಲ
"ನೀವು ನಿಮ್ಮ ಸಮಯವನ್ನು ಏಕೆ ಹಾಳು ಮಾಡುತ್ತಿದ್ದೀರಿ? ನೀವು ರಾಜಕಾರಣಿಯಾಗಬೇಕಾದರೆ ಹೊರಗೆ ಹೋಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಹೋರಾಟ ಮಾಡಿ. ನಿಮ್ಮನ್ನು ತಡೆಯುವವರು ಯಾರು? ಭಾರತ ಸ್ವತಂತ್ರ ದೇಶ. ವಿದ್ಯಾರ್ಥಿಗಳು ಇಲ್ಲಿ ಓದಲು, ಕಲಿಯಲು ಇಲ್ಲಿಗೆ ಬರಬೇಕು. ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಬಡತನದ ಅಂಚಿನಲ್ಲಿರುವ ಕುಟುಂಬಗಳಿಂದ ಬಂದವರು, ಅವರ ಕುಟುಂಬವು ಅವರ ಮೇಲೆ ಅವಲಂಬಿತವಾಗಿರುತ್ತದೆ, ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆದು ಇಲ್ಲಿಂದ ಹೊರಗಡೆ ಹೋಗಬೇಕು" ಎಂದು ಅವರು ಹೇಳಿದರು.

ಹಲವು ವಿದ್ಯಾರ್ಥಿಗಳ ಮೇಲೆ ಆರೋಪ
2020ರ ದೆಹಲಿ ಗಲಭೆಗಳ ಪಿತೂರಿ ಪ್ರಕರಣದಲ್ಲಿ ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಸೇರಿದಂತೆ ಹಲವಾರು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ. ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಇನ್ನೂ ಜೈಲಿನಲ್ಲಿದ್ದಾರೆ.
ಆಗ ಜೆಎನ್‌ಯುನಲ್ಲಿ ಓದುತ್ತಿದ್ದ ಕನ್ಹಯ್ಯಾ ಕುಮಾರ್ ಮತ್ತು ಖಾಲಿದ್ ಅವರನ್ನು 2016 ರಲ್ಲಿ ಕ್ಯಾಂಪಸ್ ಪ್ರತಿಭಟನೆಯ ಮೇಲೆ ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಕನ್ಹಯ್ಯಾ ಕುಮಾರ್ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

ಕ್ಯಾಂಪಸ್‌ನಲ್ಲಿ ಹಲವು ಬಾರಿ ಹಿಂಸಾಚಾರ
ಇತ್ತೀಚಿನ ವರ್ಷಗಳಲ್ಲಿ, ವಿಶ್ವವಿದ್ಯಾನಿಲಯವು ಎಡ ವಿದ್ಯಾರ್ಥಿ ಸಂಘಟನೆಗಳು ಮತ್ತು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಒಳಗೊಂಡ ಹಲವಾರು ಹಿಂಸಾಚಾರದ ನಿದರ್ಶನಗಳಿಗೆ ಸಾಕ್ಷಿಯಾಗಿದೆ. 2022ರ ಏಪ್ರಿಲ್‌ನಲ್ಲಿ, ರಾಮನವಮಿಯಂದು ಕಾಲೇಜು ಆವರಣದಲ್ಲಿ ಮಾಂಸಾಹಾರ ಮಾಡಲಾಗಿದೆ ಎಂದು ಆರೋಪಿಸಿ ಎರಡು ಗುಂಪುಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ ಘರ್ಷಣೆ ನಡೆಸಿದ್ದರು.
ಜನವರಿ 5, 2020 ರಂದು, ಮುಸುಕುಧಾರಿಗಳ ಗುಂಪೊಂದು ಕ್ಯಾಂಪಸ್‌ಗೆ ನುಗ್ಗಿತು ಮತ್ತು ಮೂರು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಕೋಲುಗಳು, ಕಲ್ಲುಗಳು ಮತ್ತು ಕಬ್ಬಿಣದ ರಾಡ್‌ಗಳಿಂದ ಬಾಗಿಲುಗಳನ್ನು ಧ್ವಂಸಗೊಳಿಸಿ, ವಿದ್ಯಾರ್ಥಿಗಳನ್ನು ಹೊಡೆದು ಕಿಟಕಿಗಳು, ಪೀಠೋಪಕರಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಒಡೆದು ಹಾಕಿದ್ದರು. ಸುಮಾರು ಎರಡು ಗಂಟೆಗಳ ಕಾಲ ಕ್ಯಾಂಪಸ್‌ನಲ್ಲಿ ಅಸ್ತವ್ಯಸ್ತಗೊಂಡಿದ್ದರಿಂದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಕನಿಷ್ಠ 28 ಜನರು ಗಾಯಗೊಂಡಿದ್ದರು.

ಆರೋಗ್ಯಕರ ಚರ್ಚೆ ನಡೆಸಿ, ಹಿಂಸಾಚಾರವನ್ನಲ್ಲ
ಸಕ್ರಿಯ ರಾಜಕಾರಣ ಮಾಡಲು ಮತ್ತು ಚರ್ಚೆಗಳನ್ನು ಮಾಡುವಂತೆ ಪಂಡಿತ್ ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು, ಆದರೆ ರಾಜಕೀಯ ಸಿದ್ಧಾಂತಗಳಿಗಾಗಿ ಹಿಂಸಾಚಾರಕ್ಕೆ ಇಳಿಯದಂತೆ ಸೂಚನೆ ನೀಡಿದರು.
"ಸಕ್ರಿಯ ರಾಜಕಾರಣ ಮಾಡಿ, ಚರ್ಚೆ ನಡೆಸಿ, ಮಾತನಾಡಿ ಆದರೆ ಹೊಡೆದಾಟ ಬೇಡ. ಈ ಹಿಂದೆ ಈ ರೀತಿಯ ಪ್ರತಿಭಟನೆಗಳು ಇರಲಿಲ್ಲ. ಆದರೆ ಈಗ ಘರ್ಷಣೆಗೆ ಕಾರಣವಾಗುತ್ತಿದೆ, ಏಕೆಂದರೆ ಎರಡು ಗುಂಪುಗಳು ಸಮಾನವಾಗಿ ಪ್ರಬಲವಾಗಿವೆ" ಎಂದು ಹೇಳಿದರು.
"ಎರಡು ಗುಂಪುಗಳ ನಾಯಕರು ತಾವು ಭಾರತದ ಪ್ರಧಾನಿಯಾಗಬಹುದು ಎಂದು ಭಾವಿಸುತ್ತಾರೆ. ಪ್ರಧಾನಿ ಪ್ರಚಾರಕರಾಗಿದ್ದರೂ ಜೆಎನ್‌ಯು ವಿದ್ಯಾರ್ಥಿ ಅಲ್ಲ. ಮಹತ್ವಾಕಾಂಕ್ಷೆಗಳು ಒಳ್ಳೆಯದು ಆದರೆ ಜೆಎನ್‌ಯು ಹಿಂಸಾಚಾರದ ಸ್ಥಳವಲ್ಲ. ಜೆಎನ್‌ಯು ಸಂಶೋಧನಾ ವಿಶ್ವವಿದ್ಯಾಲಯ. ನೀವು ಮಾಡಬೇಕೆಂದು ನಾನು ಹೇಳುತ್ತಿಲ್ಲ. ಚರ್ಚೆ ಮಾಡಿ, ಚರ್ಚಿಸಿ ಆದರೆ ಒಬ್ಬರನ್ನೊಬ್ಬರು ಹೊಡೆಯಬೇಡಿ,'' ಎಂದು ಅವರು ಸೇರಿಸಿದರು.












Click it and Unblock the Notifications