ತೆಲಂಗಾಣ ಚುನಾವಣೆ: 24 ಸ್ಥಾನಗಳ ಮೇಲೆ ನಿಂತಿದೆ ಬಿಜೆಪಿ ಭವಿಷ್ಯ
ಹೈದರಾಬಾದ್, ಅಕ್ಟೋಬರ್ 30: ತೆಲಂಗಾಣದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೆಣಗುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ 24 ಸ್ಥಾನಗಳು ಮುಂದಿನ ಭವಿಷ್ಯವನ್ನು ರೂಪಿಸಲಿವೆ.
ನಿರೀಕ್ಷೆಯಂತೆ ಈ ಎಲ್ಲ 24 ಸ್ಥಾನಗಳು ನಗರ ಕೇಂದ್ರಿತ ಪ್ರದೇಶಗಳಲ್ಲಿನ ಕ್ಷೇತ್ರಗಳಾಗಿವೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ 119 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸುತ್ತಿದ್ದರೂ 24 ಸ್ಥಾನಗಳು ಟಾರ್ಗೆಟ್ ಆಗಿದೆ.
ಹೈದರಾಬಾದ್ ಹಾಗೂ ರಂಗಾರೆಡ್ಡಿ ಜಿಲ್ಲೆಗಳಲ್ಲಿನ ಮತದಾರರ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದ್ದು, ಐಟಿ ಕಾರಿಡಾರ್, ನಗರವಾಸಿಗಳು, ಉದ್ಯಮಿಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.
ತೆಲಂಗಾಣದಲ್ಲಿ ಮತದಾರರಿಗೆ ಭರಪೂರ ಆಶ್ವಾಸನೆಯುಳ್ಳ ಪ್ರಣಾಳಿಕೆಯನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಸಿದ್ಧಪಡಿಸುತ್ತಿದೆ. ಈ ನಡುವೆ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು ಸೋರಿಕೆಯಾಗಿವೆ. ತೆಲಂಗಾಣದಲ್ಲಿ ಮದ್ಯ ಮಾರಾಟ ನಿಯಂತ್ರಣ ಪಡಿಸುವುದೇ ಮುಖ್ಯ ಅಂಶವಾಗಲಿದೆ.
ತೆಲಂಗಾಣದಲ್ಲಿ ಅನಿಯಂತ್ರಿತ ಮದ್ಯ ಮಾರಾಟದಿಂದಾಗಿ ಹಲವಾರು ಸಾಮಾಜಿಕ ಸಮಸ್ಯೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ಇದರ ಮೇಲೆ ನಿಯಂತ್ರಣ ಸಾಧಿಸಲು ಬಿಜೆಪಿ ಕಾರ್ಯಸೂಚಿಯನ್ನು ರೂಪಿಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿಗೆ ಈ ಬಾರಿ ಟಿಡಿಪಿ ಬೆಂಬಲವಿಲ್ಲ
ಇದೇ ನಗರ ಕೇಂದ್ರಿತ ಪ್ರದೇಶಗಳಲ್ಲಿ ಟಿಡಿಪಿ ಕಳೆದ ಬಾರಿ 15 ಸ್ಥಾನ ಗೆದ್ದಿತ್ತು. 2014ರಲ್ಲಿ ಟಿಡಿಪಿ 15 ಹಾಗೂ ಬಿಜೆಪಿ 5 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆದರೆ, ಈ ಬಾರಿ ಬಿಜೆಪಿ ಸಖ್ಯವನ್ನು ಟಿಡಿಪಿ ತೊರೆದಿದೆ. ತೆಲಂಗಾಣದಲ್ಲಿ ಏಕಾಂಗಿಯಾಗಿ ಹೋರಾಟ, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಕನಿಷ್ಟ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ನೀಡುವುದು ಗುರಿಯಾಗಿದೆ.

ಹೈದರಾಬಾದ್ ಮೇಲೆ ಮುಸ್ಲಿಮರ ಪ್ರಾಬಲ್ಯ
ಕಳೆದ ಬಾರಿ ಹೈದರಾಬಾದ್ ಮೇಲೆ ಎಐಎಂಎಂ ಪ್ರಾಬಲ್ಯ ಸಾಧಿಸಿದ್ದರೆ, ಟಿಡಿಪಿ ಮಲ್ಕಾಜ್ ಗಿರಿ ಗೆದ್ದುಕೊಂಡಿತ್ತು. ಸಿಕಂದರಾಬಾದ್ ಗೆದ್ದಿದ್ದ ಬಿಜೆಪಿಗೆ ಈಗ ಎಐಎಂಎಂ ಹಾಗೂ ಟಿಡಿಪಿ ಅಲ್ಲದೆ, ಟಿಆರ್ ಎಸ್ ನ ಪೈಪೋಟಿ ಎದುರಿಸಬೇಕಾಗಿದೆ. ಕಳೆದ ಬಾರಿ ಟಿಡಿಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಶಾಸಕರ ಪೈಕಿ ಅನೇಕರು ಟಿಆರ್ ಎಸ್ ಗೆ ಪಕ್ಷಾಂತರವಾಗಿದ್ದಾರೆ. ಹೀಗಾಗಿ, ಟಿಆರ್ ಎಸ್ ಗೆ ಹೆಚ್ಚಿನ ಬಲ ಸಿಕ್ಕಿದೆ.

ಪಕ್ಷ ಮುಖ್ಯ, ರಾಷ್ಟ್ರ ಮುಖ್ಯ ಎನ್ನುತ್ತಿರುವ ಬಿಜೆಪಿ
ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂದು ಬಿಜೆಪಿ ಮಂತ್ರ ಪಠಿಸುತ್ತಿದೆ. ಟಿಆರ್ ಎಸ್ ಹಾಗೂ ಟಿಡಿಪಿ ವಿರುದ್ಧ ನೇರ ಪೈಪೋಟಿಗಿಳಿದಿದೆ. ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದು ಬಿಂಬಿಸುತ್ತಿದೆ. ಕೇಂದ್ರ ಸರ್ಕಾರದ ಬೆಂಬಲವಿದ್ದರೆ ಮಾತ್ರ ರಾಜ್ಯ ಉದ್ಧಾರ ಸಾಧ್ಯ ಎಂದು ಎಲ್ಲೆಡೆ ಸಾರಲಾಗುತ್ತಿದೆ.

ಯಾವೆಲ್ಲ ಕ್ಷೇತ್ರದ ಮೇಲಿದೆ ಕಣ್ಣು
ಚೆವೆಲ್ಲಾ, ವಿಕಾರಾಬಾದ್, ಪರ್ಗಿ ಮುಂತಾದ ಅರೆ ನಗರ ಕೇಂದ್ರಿತ ಪ್ರದೇಶಗಳು ಕೂಡಾ ಬಿಜೆಪಿ ಟಾರ್ಗೆಟ್ ನಲ್ಲಿದೆ. ಟಿಆರ್ ಎಸ್ ಹಾಗೂ ಟಿಡಿಪಿ ತಂತ್ರಗಾರಿಕೆಗೆ ತಕ್ಕಂತೆ ಅಮಿತ್ ಶಾ ಅವರು ರಣತಂತ್ರ ಹೂಡುತ್ತಿದ್ದು, ಹೊಸ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿದೆ.












Click it and Unblock the Notifications