ಗೋದಾವರಿ ಪ್ರವಾಹ: ಕೇಂದ್ರದಿಂದ 1000 ಕೋಟಿ ಪರಿಹಾರ ಕೇಳಿದ ತೆಲಂಗಾಣ
ಹೈದರಾಬಾದ್,ಜುಲೈ 21: ತೆಲಂಗಾಣ ಸರ್ಕಾರವು ಗೋದಾವರಿ ನೀರಿನ ಪ್ರವಾಹ ಪರಿಹಾರದ ಭಾಗವಾಗಿ ತಕ್ಷಣದ ಸಹಾಯಕ್ಕಾಗಿ 1,000 ಕೋಟಿ ರೂಪಾಯಿಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.
ಇತ್ತೀಚೆಗೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯಕ್ಕೆ ಆಗಿರುವ ನಷ್ಟದ ಬಗ್ಗೆ ತೆಲಂಗಾಣ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಕಳುಹಿಸಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸರ್ಕಾರ ವಿವಿಧ ಇಲಾಖೆಗಳು ಸುಮಾರು 1,400 ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿವೆ. ಹೀಗಾಗಿ 1000 ಕೋಟಿ ತಕ್ಷಣದ ನೆರವು ನೀಡುವಂತೆ ಕೇಂದ್ರವನ್ನು ಒತ್ತಾಯಿಸಲಾಗಿದೆ.
ಹಲವಾರು ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ರಾಜ್ಯ ರಸ್ತೆ ಇಲಾಖೆ 498 ಕೋಟಿ ನಷ್ಟ ಅನುಭವಿಸಿದೆ. ಪಂಚಾಯತ್ ರಾಜ್ ಇಲಾಖೆಯ ಅಂದಾಜು 449 ಕೋಟಿ ರೂ. ನಷ್ಟ ಅನುಭವಿಸಿದೆ. ಪೌರಾಡಳಿತ ಇಲಾಖೆಗೆ 379 ಕೋಟಿ ರೂ., ನೀರಾವರಿ ಇಲಾಖೆಗೆ 33 ಕೋಟಿ ರೂ., ವಿದ್ಯುತ್ ಇಲಾಖೆಗೆ 7 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮನೆಗಳಿಗೆ ನೀರು ನುಗ್ಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿದ್ದರಿಂದ ಇನ್ನೂ 25 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಇಲಾಖೆಗಳಿಂದ ಪಡೆದ ಪ್ರಾಥಮಿಕ ಅಂದಾಜಿನ ಆಧಾರದ ಮೇಲೆ ರಾಜ್ಯ ಸರ್ಕಾರವು ನಷ್ಟದ ಬಗ್ಗೆ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದೆ.
ಇದಕ್ಕೂ ಮುನ್ನ ಸೋಮವಾರ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಜೀವ ಮತ್ತು ಜೀವನೋಪಾಯಕ್ಕೆ ಹಾನಿಯನ್ನುಂಟು ಮಾಡಿರುವ ಗೋದಾವರಿ ಪ್ರವಾಹದ ಬಗ್ಗೆ ಮಾಹಿತಿ ನೀಡಿದ್ದರು.

ಎನ್‌ಡಿಆರ್‌ಎಫ್ 13 ತಂಡಗಳ ನಿಯೋಜನೆ
ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಕಚೇರಿಯ ಹೇಳಿಕೆ ಪ್ರಕಾರ, ಗೃಹ ಸಚಿವಾಲಯವು ಅಗತ್ಯವಿರುವ ಎಲ್ಲ ಬೆಂಬಲವನ್ನು ಶೀಘ್ರವಾಗಿ ನೀಡುವಂತೆ ಅಮಿತ್ ಶಾ ನಿರ್ದೇಶಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 13 ತಂಡಗಳನ್ನು ತೆಲಂಗಾಣದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿಯೋಜಿಸಲಾಗಿದೆ.

ಭದ್ರಾಚಲಂನಲ್ಲಿ ಮೂರನೇ ಹಂತದ ಎಚ್ಚರಿಕೆ
ತೆಲಂಗಾಣ ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗೋದಾವರಿ ನದಿಯಲ್ಲಿ ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಗುರುವಾರ ಭದ್ರಾಚಲಂನಲ್ಲಿ ಮೂರನೇ ಹಂತದ ಎಚ್ಚರಿಕೆಯ ಮಟ್ಟವನ್ನು ತಲುಪಿದೆ. ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರವು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಗುರುತಿಸಿ ವಿಶೇಷ ಶಿಬಿರಗಳಿಗೆ ಸ್ಥಳಾಂತರಿಸಲು ಗುರುವಾರ ನಿರ್ದೇಶನ ನೀಡಿದೆ.

ಎನ್‌ಡಿಆರ್‌ಎಫ್ ಪಡೆ ನಿಯೋಜನೆ
ಏತನ್ಮಧ್ಯೆ, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ತೆಲಂಗಾಣ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಿಯೋಜಿಸಿ ರೈತರು ಮತ್ತು ಮೃತರ ಸಂಬಂಧಿಕರಿಗೆ ಆರ್ಥಿಕ ಪರಿಹಾರವನ್ನು ಕೋರಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ರಸ್ತೆಗಳ ದುರಸ್ತಿ ಮತ್ತು ನಿರ್ಮಾಣಕ್ಕಾಗಿ 2,000 ಕೋಟಿ ರೂಪಾಯಿಗಳ ತಕ್ಷಣದ ಪರಿಹಾರ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರಕ್ಕೆ ಹಲವು ಬಾರಿ ವರದಿ
ಏತನ್ಮಧ್ಯೆ, ತೆಲಂಗಾಣ ವಿಶೇಷ ಮುಖ್ಯ ಕಾರ್ಯದರ್ಶಿ, ನೀರಾವರಿ ಮತ್ತು ಕಮಾಂಡ್ ಏರಿಯಾ ಡೆವಲಪ್‌ಮೆಂಟ್ (ಐ & ಸಿಎಡಿ) ರಜತ್ ಕುಮಾರ್ ಮಾತನಾಡಿ, ಪೋಲಾವರಂ ಹಿನ್ನೀರಿನಿಂದ ತೆಲಂಗಾಣಕ್ಕೆ ಆಗುವ ನಷ್ಟ ಮತ್ತು ಇತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಪೋಲಾವರಂ ಹಿನ್ನೀರು ಸಮಸ್ಯೆ ಕುರಿತು ಅಧ್ಯಯನ ನಡೆಸುವಂತೆ ಕೇಂದ್ರಕ್ಕೆ ಹಲವು ಬಾರಿ ವರದಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications