ಹೈದ್ರಾಬಾದ್ ಎನ್ ಕೌಂಟರ್ ಹಿಂದೆ ಸಾವಿರ ಸಾವಿರ ಅನುಮಾನ!
Recommended Video
ದೆಹಲಿ, ಡಿಸೆಂಬರ್.06: ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ. ದೇಶಾದ್ಯಂತ ಸೈಬರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಜೊತೆಗೆ ಎನ್ ಕೌಂಟರ್ ನಕಲಿಯೋ ಅಸಲಿಯೋ ಎಂಬ ಅನುಮಾನ ಹುಟ್ಟಿಕೊಂಡಿದೆ.
ಹೈದ್ರಾಬಾದ್ ನಲ್ಲಿ ನಕಲಿ ಎನ್ ಕೌಂಟರ್ ನಡೆಸಿ ನಾಲ್ವರನ್ನು ಪೊಲೀಸರೇ ಬಲಿ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದು ಉದ್ದೇಶಪೂರ್ವಕ ಎನ್ ಕೌಂಟರ್ ಎನ್ನಲಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಆಗಿರುವ ಬಗ್ಗೆ ಪ್ರಸ್ತಾಪಿಸಲಾಗುತ್ತಿದೆ.
ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಹೈದ್ರಾಬಾದ್ ಎನ್ ಕೌಂಟರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಆಯೋಗವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಎನ್ ಕೌಂಟರ್ ಕುರಿತು ತನಿಖೆ ನಡೆಸಲು ಮುಂದಾಗಿದೆ.

ನಾಲ್ವರು ಆರೋಪಿಗಳ ಎನ್ ಕೌಂಟರ್ ನಡೆದ ಹೈದ್ರಾಬಾದ್ ಹೊರವಲಯ ಚಟಾನ್ ಪಲ್ಲಿ ಸ್ಥಳಕ್ಕೆ ರಾಷ್ಟ್ರೀಯ ಮಾನವಹಕ್ಕು ಆಯೋಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಕುರಿತು ಹೈದ್ರಾಬಾದ್ ವಿಭಾಗದ ಮಾನವಹಕ್ಕು ಆಯೋಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಲಿರುವ ಅಧಿಕಾರಿಗಳ ತಂಡ, ಈ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ವರದಿ ನೀಡಲಿದೆ.

ಇಂದು ಬೆಳಗಿನ ಜಾವ ಹೈದ್ರಾಬಾದ್ ಹೊರವಲಯ ಚಟಾನ್ ಪಲ್ಲಿ ಬಳಿ ಮಧ್ಯರಾತ್ರಿ 2.30ರ ಸಮಯದಲ್ಲಿ ಸ್ಥಳ ಮಹಜರುಗೆ ತೆರಳಿದ್ದ ವೇಳೆ ಆರೋಪಿಗಳೇ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ನಾಲ್ವರ ಪೈಕಿ ಇಬ್ಬರು ಆರೋಪಿಗಳು ಪೊಲೀಸರ ಪಿಸ್ತೂಲ್ ಕಿತ್ತುಕೊಂಡರು. ಇದರಿಂದ ಬೆದರಿದ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿದರು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications