'ಕೆಸಿಆರ್' ಅಂದರೆ ಖಾವೋ ಕಮೀಷನ್ ರಾವ್: ಕಾಲೆಳೆದ ರಾಹುಲ್ ಗಾಂಧಿ
ಹೈದರಾಬಾದ್, ನವೆಂಬರ್ 29: ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ರನ್ನು ಕೆಸಿಆರ್ ಅಂತಲೇ ಕರೆಯಲಾಗುತ್ತದೆ. 'ಕೆಸಿಆರ್' ಅಂದರೆ ಖಾವೋ ಕಮೀಷನ್ ರಾವ್ (ಕಮೀಷನ್ ತಿನ್ನಿ ರಾವ್) ಎಂದು ಕಾಲೆಳೆಯುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ ಅಭಿವೃದ್ಧಿ ಮಾಡಬೇಕಾದ ಹಣದಲ್ಲಿ ಕೆಸಿಆರ್ ಕುಟುಂಬದವರು ಶ್ರೀಮಂತರಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತೆಲಂಗಾಣದ ವಿಧಾನಸಭಾ ಚುನಾವಣೆಗೆ ಪ್ರಚಾರದಲ್ಲಿ ತೊಡಗಿಕೊಂಡಿರುವ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಚಂದ್ರಶೇಖರ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಡಕಟ್ಟು ಜನಾಂಗದವರು ಹಾಗೂ ರೈತರ ಹಕ್ಕುಗಳನ್ನು ನಿರಾಕರಿಸಿ, ಬಂಡವಾಳದಾರರಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನ ಹಳೆ ಯೋಜನೆಗಳಿಗೆ ಮರು ನಾಮಕರಣ ಮಾಡಿ, ಅದರ ವೆಚ್ಚ ಹೆಚ್ಚಿಸಿ, ಆ ಮೂಲಕ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕಮೀಷನ್ ಪಡೆಯುವುದೇ ಕೆಸಿಆರ್ ಕೆಲಸ. ಕೆಸಿಆರ್ ಅಂದರೆ ಖಾವೋ ಕಮೀಷನ್ ರಾವ್ ಅಂತ ಅರ್ಥ ಎಂದು ನಿಜಾಮ್ ಬಾದ್ ಸಭೆಯಲ್ಲಿ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್ ನ ಎಲ್ಲ ನಡೆಗಳಿಗೆ ಕೆಸಿಆರ್ ಬೆಂಬಲ ನೀಡಿದ್ದಾರೆ. ಆದ್ದರಿಂದ ಟಿಆರ್ ಎಸ್ ಅನ್ನೋ ತಮ್ಮ ಪಕ್ಷದ ಹೆಸರನ್ನು ಟಿ- ಆರೆಸ್ಸೆಸ್ ಎಂದು ಬದಲಿಸಿಕೊಳ್ಳಲಿ ಎಂದು ಲೇವಡಿ ಮಾಡಿದ್ದಾರೆ.
ತೆಲಂಗಾಣದಲ್ಲಿ ತಮ್ಮ ಕುಟುಂಬದ ಅಧಿಕಾರ, ದೆಹಲಿಯಲ್ಲಿ ಮೋದಿ ಆಡಳಿತ ಇರಬೇಕು ಅನ್ನೋದು ಕೆಸಿಆರ್ ಗುರಿ. ಆದರೆ ಇಬ್ಬರಿಗೂ ಕಾಲ ಮುಗಿದಿದೆ ಎಂದಿದ್ದಾರೆ.












Click it and Unblock the Notifications