ಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿ
ಹೈದರಾಬಾದ್, ಮೇ 27: ಕೆಲಸವಿಲ್ಲದೆ, ಹೊಟ್ಟೆಗೆ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದೆ ಸಂಕಟ ಅನುಭವಿಸುತ್ತಿದ್ದ ನೂರಾರು ಜನರಿಗೆ ಬೆಳಕಿನ ಕಿರಣವಾಗಿ ಕಂಡವರು 31 ವರ್ಷದ ಗೌತಮ್ ಕುಮಾರ್.
ಹೈದರಾಬಾದ್‌ನ ಗೌತಮ್ ಕಳೆದ ಐದು ವರ್ಷಗಳಿಂದ ನಿರ್ಗತಿಕರಿಗೆ, ಹಸಿದ ಹೊಟ್ಟೆಗಳಿಗೆ ಆಹಾರ ಒದಗಿಸುವ ಮಹಾನ್ ಪರೋಪಕಾರಿ ಕೆಲಸ ಮಾಡುತ್ತಿದ್ದಾರೆ.
ಹೈದರಾಬಾದ್‌ನಲ್ಲಿ 'ಸರ್ವ್ ನೀಡೀ' ಎಂಬ ಎನ್‌ಜಿಒ ಆರಂಭಿಸಿರುವ ಗೌತಮ್ ಕುಮಾರ್, ದಿನವೊಂದಕ್ಕೆ ಸಾವಿರಕ್ಕೂ ಅಧಿಕ ಜನರಿಗೆ ಆಹಾರ ಒದಗಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.

ಯುನಿವರ್ಸಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಅವರಿಗೆ ಭಾರತದ ಪ್ರತಿನಿಧಿ ಕೆವಿ ರಮಣ ರಾವ್ ಮತ್ತು ತೆಲಂಗಾಣ ಪ್ರತಿನಿಧಿ ಟಿಎಂ ಶ್ರೀಲತಾ ಹಸ್ತಾಂತರಿಸಿದರು.
ತಮ್ಮ ಕಾರ್ಯದ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗೌತಮ್, '2014ರಲ್ಲಿ ನಾವು 'ಸರ್ವ್ ನೀಡೀ'ಯನ್ನು ಆರಂಭಿಸಿದೆವು. ಅಂದಿನಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಿಸಿಕೊಂಡಿದ್ದೇವೆ. ಸಾವಿರಕ್ಕೂ ಹೆಚ್ಚು ಜನರಿಗೆ ಒಂದೇ ದಿನದಲ್ಲಿ ಆಹಾರ ಒದಗಿಸಿತ್ತು ವಿಶ್ವದಾಖಲೆಯಾಗಿದೆ' ಎಂದು ತಿಳಿಸಿದರು.
'ಯುನಿವರ್ಸಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ನನಗೆ ಈ ಕಾರ್ಯಕ್ಕಾಗಿ ನೀಡಲಾಗಿದೆ. ನಮ್ಮ ಸಂಸ್ಥೆ ಇರುವಾಗ ಯಾರೊಬ್ಬರೂ ಅನಾಥರಂತೆ ಸಾಯಲು ಅರ್ಹತೆ ಹೊಂದಿರುವುದಿಲ್ಲ ಎನ್ನುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ. ಹಸಿವಿನಿಂದ ಯಾರೂ ಸಾಯಬಾರದು. ಈ ಕಾರಣಕ್ಕಾಗಿ ನಮ್ಮ ಸಂಸ್ಥೆಯನ್ನು ವಿಸ್ತರಿಸುತ್ತಿದ್ದೇವೆ. ಇನ್ನಷ್ಟು ಜನರಿಗೆ ನೆರವಾಗುವ ಸಲುವಾಗಿ ಇತರರಿಂದ ಮತ್ತು ಸರ್ಕಾರದ ಕಡೆಯಿಂದ ಸಹಾಯದ ಹಸ್ತವನ್ನು ಎದುರು ನೋಡುತ್ತಿದ್ದೇವೆ' ಎಂದು ಹೇಳಿದರು.
2014ರಲ್ಲಿ 'ಸರ್ವ್ ನೀಡೀ' ಆರಂಭಿಸುವುದಕ್ಕೂ ಮುನ್ನ ಗೌತಮ್ ಅವರು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ವಿವಿಧ ಕಂಪೆನಿಗಳಲ್ಲಿ ವಿವಿಧ ರೀತಿಯ ಕೆಲಸಗಳನ್ನು ಅವರು ಮಾಡಿದ್ದಾರೆ. ಆದರೆ, ಅನ್ನದ ಅಗತ್ಯ ಇರುವವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿರಲಿಲ್ಲ. 26 ವರ್ಷದವರಿದ್ದಾಗ ಅವರ ತಲೆಯಲ್ಲಿ ಈ ಆಲೋಚನೆ ಹುಟ್ಟಿತು. ಸಮಾಜಕ್ಕೆ ಅರ್ಥಪೂರ್ಣ ರೀತಿಯಲ್ಲಿ ಕೊಡುಗೆ ನೀಡಬೇಕು ಎಂದೆನಿಸಿದಾಗ ಸ್ವತಃ ಅವರೊಬ್ಬರೇ ಈ ಕೆಲಸ ಆರಂಭಿಸಿದ್ದರು.












Click it and Unblock the Notifications