ಬ್ರೇಕಿಂಗ್: ಸಿಕಂದರಾಬಾದ್‌ನ ಗೋಡೌನ್‌ನಲ್ಲಿ ಅಗ್ನಿ ಅವಘಡ: 11 ಮಂದಿ ಸಾವು
ಸಿಕಂದ್ರಾಬಾದ್ ಮಾರ್ಚ್ 23: ತೆಲಂಗಾಣದ ಸಿಕಂದರಾಬಾದ್‌ನ ಭೋಯಿಗುಡಾ ಪ್ರದೇಶದ ಕಬ್ಬಿಣ ಮತ್ತು ಪ್ಲಾಸ್ಟಿಕ್ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 11 ವಲಸೆ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಹೈದರಾಬಾದ್‌ನ ಭೋಯಿಗುಡಾದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಯ ಪ್ರಕಾರ, ಪತ್ತೆಯಾದ ಶವಗಳು ಬಹುಶಃ ಬಿಹಾರದಿಂದ ವಲಸೆ ಬಂದ ಕಾರ್ಮಿಕರಾಗಿರಬಹುದು ಎನ್ನಲಾಗಿದೆ. ಗೋಡೌನ್‌ನ ಮೇಲಿನ ಮಹಡಿಯಲ್ಲಿ 13 ಕಾರ್ಮಿಕರು ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಈ ಗೋಡೌನ್ ಸಿಕಂದರಾಬಾದ್ ರೈಲು ನಿಲ್ದಾಣದ ಬಳಿಯ ದಟ್ಟವಾದ ವಸತಿ ಕಾಲೋನಿಯಲ್ಲಿದೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಅಪಘಾತದ ನಂತರ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳು ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಮೃತರಾದ ಕಾರ್ಮಿಕರ ಮೃತದೇಹಗಳನ್ನು ಹುಟ್ಟೂರಿಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಅಪಘಾತದ ನಂತರ 8 ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿವೆ. ಬೆಳಗ್ಗೆ 7 ಗಂಟೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಅಪಘಾತದಲ್ಲಿ 11 ಶವಗಳು ಪತ್ತೆಯಾಗಿವೆ. ಈ ಎಲ್ಲಾ ದೇಹಗಳು ಸುಟ್ಟು ಕರಕಲಾಗಿವೆ. ಅವುಗಳನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಒಬ್ಬ ಕಾರ್ಮಿಕ ಬದುಕುಳಿದಿದ್ದಾನೆ. ಆದರೆ ಅವರೂ ಸಹ ತೀವ್ರವಾಗಿ ಸುಟ್ಟುಹೋಗಿದ್ದಾರೆ. ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವರದಿ ಪ್ರಕಾರ ಈ ಕೂಲಿ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.













Click it and Unblock the Notifications