ಆಂಧ್ರ ಸಿಎಂ ತೆಗಳಿದ್ದಕ್ಕೆ ತೆಲಂಗಾಣ ಸಿಎಂ ಮೇಲೆ ಎಫ್ ಐಆರ್
ಹೈದರಾಬಾದ್, ಜೂ.08: ತೆಲಂಗಾಣ ವಿಧಾನಪರಿಷತ್ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಓಟಿಗಾಗಿ ಲಂಚ ನೀಡಿದ ಆರೋಪ ಈಗ ರಾಜಕೀಯ ಬಣ್ಣ ಬಳೆದುಕೊಂಡಿದೆ.
ತೆಲಂಗಾಣ ಸಿಎಂ ಕೆಸಿಆರ್ ಅವರು ಟಿಡಿಪಿ ಶಾಸಕರ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಆಂಧ್ರ ಸಿಎಂ ನಾಯ್ಡು ವಿರುದ್ಧ ಇಲ್ಲಸಲ್ಲದ ಆರೋಪ ಹೊರೆಸಿದ್ದಾರೆ ಎಂದು ವಿಶಾಖಪಟ್ಟಣಂ ನಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ತೆಗಳಿದ್ದಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. [ಲಂಚ ಆಮಿಷ: ಟಿಡಿಪಿ ಶಾಸಕ ರೇವಂತ್ ಗೆ ನ್ಯಾಯಾಂಗ ಬಂಧನ]

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಬಲಿಗರು ಗುಂಟೂರು, ವಿಶಾಖಪಟ್ಟಣಂ ಸೇರಿದಂತೆ ವಿವಿಧ ಠಾಣೆಗಳಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ವಿರುದ್ಧ ದೂರು ದಾಖಲಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್ಸನ್ ಎಂಬವರಿಗೆ ದೂರವಾಣಿ ಮೂಲಕ ಆಮಿಷವೊಡ್ಡಿದ್ದರು ಎನ್ನಲಾದ ಆಡಿಯೋ ಟೇಪ್ ಬಹಿರಂಗಗೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಕೆ. ಚಂದ್ರಶೇಖರ್ ರಾವ್ ಅವರು ಟಿಡಿಪಿ ಶಾಸಕರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಅರೋಪಿಸಿ ಆಂಧ್ರ ನೀರಾವರಿ ಸಚಿವ ದೇವಿನೇನಿ ಉಮಾಮಹೇಶ್ವರ್ ರಾವ್ ದೂರು ನೀಡಿದ್ದಾರೆ.
ಈ ನಡುವೆ ಆಡಿಯೋ ಟೇಪ್ ಬಗ್ಗೆ ಪ್ರತಿಕ್ರಿಯಿಸಿರುವ ಚಂದ್ರಬಾಬು ನಾಯ್ಡು ಅವರು 'ಇದು ನನ್ನ ದನಿಯಲ್ಲ, ನಾನು ಸ್ಟೀಫನ್ಸನ್ ಜೊತೆ ಈ ಬಗ್ಗೆ ಮಾತನಾಡಿಲ್ಲ, ಆರೋಪ ಸಾಬೀತಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ' ಎಂದಿದ್ದಾರೆ.
ತೆಲಂಗಾಣ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಹಾಗೂ ಆಂಧ್ರಪ್ರದೇಶದ ಪೊಲೀಸ್ ತಂಡ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿವೆ. ಓಟಿಗಾಗಿ ಲಂಚ ನೀಡಲು ಮುಂದಾಗಿದ್ದ ಟಿಡಿಪಿ ನಾಯಕ ರೇವಂತ್ ರೆಡ್ಡಿ ಸದ್ಯ ಜೈಲಿನಲ್ಲಿದ್ದಾರೆ.15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.












Click it and Unblock the Notifications