ಲಂಚ ಆಮಿಷ: ಟಿಡಿಪಿ ಶಾಸಕ ರೇವಂತ್ ಗೆ ನ್ಯಾಯಾಂಗ ಬಂಧನ
ಹೈದರಾಬಾದ್, ಜೂ.1: ತೆಲುಗುದೇಶಂ ಪಕ್ಷದ ಪರ ಮತ ಹಾಕುವಂತೆ ಆಂಗ್ಲೋ ಇಂಡಿಯನ್ ನಾಮ ನಿರ್ದೇಶಿತ ವಿಧಾನ ಪರಿಷತ್ ಸದಸ್ಯರಿಗೆ ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ತೆಲಂಗಾಣ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಬಂಧಿಸಲಾಗಿದೆ.
ಬಂಧಿತ ರೇವಂತ್ ರನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚೆರ್ಲಪಲ್ಲಿ ಜೈಲಿಗೆ ರೇವಂತ್ ರನ್ನು ಪೊಲೀಸರು ಕರೆದೊಯ್ದಿದ್ದಾರೆ.
ನಾಮನಿರ್ದೇಶಿತ ಆಂಗ್ಲೋ-ಇಂಡಿಯನ್ ಸದಸ್ಯ ಸ್ಟೀಫನ್ ಸನ್ ಅವರಿಗೆ ಜೂ.1 ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷದ ಪರ ಮತ ಹಾಕುವಂತೆ ಲಂಚದ ಆಮಿಷ ಒಡ್ಡಿದ ಆರೋಪ ರೇವಂತ್ ಅವರ ಮೇಲಿದೆ.[ಈ ಸುದ್ದಿ ವಿಡಿಯೋದಲ್ಲಿ ನೋಡಿ]

ಸಿಕಂದರಾಬಾದಿನ ಲಾಲಾಗುಡದ ಮನೆಯಲ್ಲಿ ಭಾನುವಾರ ಈ ಡೀಲ್ ನಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶಾಸಕ ರೇವಂತ್ ರೆಡ್ಡಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆ, ಐಪಿಸಿ ಸೆಕ್ಷನ್ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸಿಬಿ ಮುಖ್ಯಸ್ಥ ಎ.ಕೆ ಖಾನ್ ಹೇಳಿದ್ದಾರೆ.
ಟಿಆರ್‌ಎಸ್ ನಾಯಕ,ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಕುತಂತ್ರ ಇದಾಗಿದ್ದು, ಟಿಡಿಪಿ ಶಾಸಕರನ್ನು ಕಟ್ಟಿ ಹಾಕಲು ಯೋಜನೆ ಮಾಡಲಾಗಿದೆ ಎಂದು ಟಿಡಿಪಿ ಕಿಡಿಕಾರಿದೆ.
ಟಿಡಿಪಿ ಅಭ್ಯರ್ಥಿ ಪರ ಮತ ಹಾಕಿದರೆ 5 ಕೋಟಿ ರು ನೀಡುತ್ತೇನೆ. ಸದ್ಯಕ್ಕೆ 50 ಲಕ್ಷ ರು ಅಡ್ವಾನ್ಸ್ ಇಟ್ಟುಕೊಳ್ಳಿ ಎಂದು ಸ್ಟೀಫನ್ಸನ್ ಗೆ ರೇವಂತ್ ರೆಡ್ಡಿ ಲಂಚ ನೀಡುವಾಗ ಸಿಕ್ಕಿಬಿದ್ದರು. 2009ರಲ್ಲಿ ಕರ್ನಾಟಕ ಬಿಜೆಪಿ ಶಾಸಕ ವೈ. ಸಂಪಂಗಿ ಅವರು 5 ಲಕ್ಷ ರು. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications