ಹೈದರಾಬಾದ್: ರಾಮನವಮಿ ಮೆರವಣಿಗೆ ವೇಳೆ ಬಿಜೆಪಿ ಶಾಸಕನ ವಿವಾದಾತ್ಮಕ ಹಾಡು
ಹೈದರಾಬಾದ್ ಏಪ್ರಿಲ್ 12: ಈ ಬಾರಿ ರಾಮನವಮಿ ಯಾತ್ರೆಯನ್ನು ದೇಶದಾದ್ಯಂತ ಏಪ್ರಿಲ್ 10ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಎರಡು ಸಮುದಾಯಗಳ ನಡುವೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ವರದಿಯಾಗಿದೆ. ಹೈದರಾಬಾದ್‌ನಲ್ಲಿ ರಾಮನವಮಿಯಂದು ಬಿಜೆಪಿ ಶಾಸಕ ಟಿ ರಾಜಾ ಅವರು ವಿವಾದಾತ್ಮಕ ಹಾಡನ್ನು ಹಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಶಾಸಕ ಟಿ ರಾಜಾ ಅಧ್ಯಕ್ಷತೆಯಲ್ಲಿ ಏಪ್ರಿಲ್ 10ರಂದು ರಾಮನವಮಿ ಯಾತ್ರೆಯನ್ನು ಕೈಗೊಳ್ಳಲಾಯಿತು. ಈ ಸಮಯದಲ್ಲಿ ಟಿ ರಾಜಾ ವಿವಾದಾತ್ಮಕ ಹಾಡನ್ನು ಹಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಬಿಜೆಪಿ ಶಾಸಕ ಟಿ ರಾಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಮನವಮಿ ಯಾತ್ರೆಯಲ್ಲಿ ಬಿಜೆಪಿ ಶಾಸಕರು ಹಾಡಿದ ಹಾಡಿನ ಸಾಹಿತ್ಯ ಹೀಗಿದೆ- "ಭಾರತವು ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಮತ್ತು ಭಗವಾನ್ ರಾಮನ ಹೆಸರನ್ನು ತೆಗೆದುಕೊಳ್ಳದವರು ಭಾರತದಿಂದ ಪಲಾಯನ ಮಾಡಬೇಕಾಗುತ್ತದೆ" ಎಂದು ಹೇಳುತ್ತದೆ.
ಬಿಜೆಪಿ ಶಾಸಕ "ಜೋ ರಾಮ್ ಕಾ ನಾಮ್ ನಾ ಲಿಯಾ ತೋ ಭಾರತ್ ಸೇ ಭಗ್ನಾ ಹೈ" ಎಂದು ಹಾಡಿದ್ದಾರೆ. ಅವರು ಪ್ರಚೋದನಕಾರಿ ಹಾಡನ್ನು ಹಾಡಿದ್ದಾರೆ ಎಂದು ಆರೋಪಿಸಲಾಗಿದೆ. ಟಿ ರಾಜಾ ಅವರು ಗೋಶಾಮಹಲ್ ಕ್ಷೇತ್ರದ ಶಾಸಕರಾಗಿದ್ದಾರೆ ಮತ್ತು ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ.
ರಾಯಚೂರು: ಲವ್ ಕೇಸರಿ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್, ಜೆಡಿಎಸ್
ಈ ಮೆರವಣಿಗೆಗೂ ಮುನ್ನ ಬಿಜೆಪಿ ಶಾಸಕ ರಾಜಾ ರಾಣಿ ಅವಂತಿ ಬಾಯಿ ಸಭಾಂಗಣದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದರು. ಜೊತೆಗೆ ಸೀತಾರಾಂಬಾಗ್‌ನಿಂದ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದರು. ಈ ಮೆರವಣಿಗೆಯಲ್ಲಿ ಕೇಸರಿ ಟೋಪಿ ಧರಿಸಿದ ಸಾವಿರಾರು ಜನರು ಜಮಾಯಿಸಿದ್ದರು. ಇದರಲ್ಲಿ ದೊಡ್ಡ ಧ್ವನಿವರ್ಧಕಗಳನ್ನೂ ಬಳಸಲಾಗಿತ್ತು. ಈ ವೇಳೆ ಅವರು ಹಿಂದೂಗಳನ್ನು ಒಗ್ಗೂಡಿಸಲು ಜನರಿಗೆ ಕರೆಕೊಟ್ಟರು.
ಶ್ರೀರಾಮನವಮಿ ಹಿನ್ನೆಲೆಯಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಎನ್ನುವ ಟ್ರೆಂಡ್ ಸೃಷ್ಟಿಯಾಗಬೇಕು ಎಂದು ಶ್ರೀರಾಮಸೇನೆ ಕರೆ ನೀಡಿದೆ. ಹೆಣ್ಣು ಮಕ್ಕಳನ್ನು ಮಕ್ಕಳು ಹೆರುವ ಯಂತ್ರ ಎಂದು ಅವರು ಅಂದುಕೊಂಡಿದ್ದಾರೆ. ನಮ್ಮ ಪ್ರತಿ ಕಾರ್ಯಕರ್ತ ಕೂಡಾ ಲವ್ ಜಿಹಾದ್ ಪ್ರತಿಯಾಗಿ ಲವ್ ಕೇಸರಿ ಮಾಡಬೇಕು. ರಾಯಚೂರಿನಲ್ಲಿ ಒಂದೇ ಒಂದು ಲವ್ ಜಿಹಾದ್ ಪ್ರಕರಣ ಬರಬಾರದು ಎಂದು ಜಿಲ್ಲಾ ಸಂಚಾಲಕ ರಾಜಾಚಂದ್ರ ಹೇಳಿರುವುದು ವಿವಾದಕ್ಕೆ ಎಡೆ ಮಾಡಿದೆ.

ಕಳೆದ ಏಪ್ರಿಲ್ 10ರಂದು ರಾಯಚೂರಿನಲ್ಲಿ ಆಯೋಜಿಸಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಅನ್ಯಧರ್ಮದ ಕುರಿತು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಐಕ್ಯ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಿದೆ.