ಒಂದೇ ಅಪಾರ್ಟ್‌ಮೆಂಟಿನಲ್ಲಿ 25 ಜನರಿಗೆ ಕೊರೊನಾ!
ಹೈದರಾಬಾದ್ ಮೇ 16: ಹೈದರಾಬಾದ್‌ನ ಮದನಪೇಟೆಯ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 25 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.
ಶನಿವಾರ ಹೈದರಾಬಾದ್ ಮಹಾನಗರ ಪಾಲಿಕೆ ಅಧಿಕಾರಿಗಳು ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಎಲ್ಲಾ ರೋಗಿಗಳನ್ನು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮದನಪೇಟೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಸುಮಾರು 50 ಜನರ ಮೇಲೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 23 ಪುರುಷರಿಗೆ, 11 ತಿಂಗಳ ಮಗುವಿಗೆ ಮತ್ತು ಒಬ್ಬ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇನ್ನೂ ಐದು ಜನರ ಮೇಲೆ ಕೊರೊನಾ ಶಂಕೆ ಇದ್ದು ಆ ವರದಿಗಳು ಇನ್ನೂ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟೊಂದು ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವುದು ಹೈದರಾಬಾದ್ ಬೆಚ್ಚಿ ಬೀಳುವಂತೆ ಮಾಡಿದೆ.
ಕರೋನವೈರಸ್ ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ವೈದ್ಯರು ಅಲ್ಲಿಗೇ ಭೇಟಿ ನೀಡಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದಾರೆ. ಮದನಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 4,000 ನರ್ಸ್‌ಗಳು ಸ್ಕ್ರೀನಿಂಗ್ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ತೆಲಂಗಾಣದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,414 ಕ್ಕೆ ಏರಿಕೆಯಾಗಿದೆ. ಇಂದು 47 ಹೊಸ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಕೊರೊನಾದಿಂದ 34 ಜನ ಮೃತಪಟ್ಟಿದ್ದಾರೆ.