ತ್ರಿಕೋನ ಪ್ರೇಮದ ಬೆಂಕಿಯಲ್ಲಿ ಬಿದ್ದು ಬೆಂದು ಹೋದ ಇಬ್ಬರು ವಿದ್ಯಾರ್ಥಿಗಳು
ಹೈದರಾಬಾದ್, ಅಕ್ಟೋಬರ್ 01: ತೆಲಂಗಾಣದ ರಾಜಧಾನಿ ಹೈದರಾಬಾದಿನಿಂದ ಸುಮಾರು 190 ಕಿ. ಮೀ ದೂರದಲ್ಲಿರುವ ಜಗ್ತಿಯಾಲ್ ಎಂಬ ಪಟ್ಟಣದಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಸಂಗ ದುರಂತ ಅಂತ್ಯ ಕಂಡಿದೆ.
ಒಂದೇ ಹುಡುಗಿಯನ್ನು ಪ್ರೀತಿಸಿದ್ದ ಹತ್ತನೇ ತರಗತಿಯ ಇಬ್ಬರು ಹುಡುಗರು, ಹುಡುಗಿಗಾಗಿ ಕಿತ್ತಾಡಿ, ಮದ್ಯ ಸೇವಿಸಿ, ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
'ಮೃತ ವಿದ್ಯಾರ್ಥಿಗಳಿಬ್ಬರು 16 ವರ್ಷದೊಳಗಿನವರಾಗಿದ್ದು, ಭಾನುವಾರ ರಾತ್ರಿ ಮದ್ಯ ಸೇವನೆ ನಂತರ ಪರಸ್ಪರ ಬೆಂಕಿ ಹಂಚಿಕೊಂಡಿದ್ದಾರೆ. ಕೆ. ಮಹೇಂದರ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಕಿಯಲ್ಲಿ ಬೆಂದು ತೀವ್ರವಾಗಿ ಗಾಯಗೊಂಡಿದ್ದ ರವಿ ತೇಜ ಎಂಬ ಹುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ದುರ್ಘಟನೆಗೆ ಸಾಕ್ಷಿಯಾಗಿ ಮತ್ತೊಬ್ಬ ಹುಡುಗ ಕೂಡಾ ಮೃತ ಹುಡುಗರ ಜತೆಗಿದ್ದ ಎಂದು ಮೃತರ ಕುಟುಂಬದವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಮೂರನೇ ಹುಡುಗ ಯಾರು ಎಂಬುದರ ಬಗ್ಗೆ ತನಿಕೆ ನಡೆಸಲಾಗುತ್ತದೆ.
ಕುಡಿದ ಮತ್ತಿನಲ್ಲಿದ್ದರು: ತನಿಖಾಧಿಕಾರಿಗಳ ಪ್ರಕಾರ, ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್ ಹಾಗೂ ಮೊಬೈಲ್ ಫೋನ್ ಗಳು ಪತ್ತೆಯಾಗಿವೆ. ಇಬ್ಬರು ವಿದ್ಯಾರ್ಥಿಗಳ ಮೊಬೈಲ್ ಫೋನ್ ಡೇಟಾ ರಿಕೆವರಿ ಮಾಡಿಕೊಂಡು ಪರಿಶೀಲಿಸಲಾಗುತ್ತಿದೆ. ಮೃತ ಹುಡುಗರ ನಡುವೆ ಮಾತಿನ ಚಕಮಕಿ ನಡೆದಿತ್ತು . ನಂತರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಆದರೆ, ಇದು ಪೂರ್ವ ನಿಯೋಜಿತ ಕೃತ್ಯವೆ? ಇಬ್ಬರು ಹುಡುಗರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತೆ? ಕುಡಿತ ಮತ್ತಿನಲ್ಲಿ ಈ ರೀತಿ ಮಾಡಿಕೊಂಡರೆ? ಪೆಟ್ರೋಲ್ ತೆಗೆದುಕೊಂಡು ಏಕೆ ಹೋಗಿದ್ದರು? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ?
ಮೃತ ವಿದ್ಯಾರ್ಥಿಗಳಿಬ್ಬರಿಗೂ 16 ವರ್ಷ ವಯಸ್ಸಾಗಿತ್ತು. ಮಿಷನರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಮ್ಮ ಕ್ಲಾಸ್ ಮೇಟ್ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಪ್ರೀತಿ ವಿಷಯಕ್ಕೆ ಕಿತ್ತಾಡಿಕೊಂಡು ತಮ್ಮ ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ತನಿಖೆ ಮುಂದುವರಿದಿದೆ.












Click it and Unblock the Notifications