Hunsur Elections: ಸಿದ್ದರಾಮಯ್ಯ ಆಪ್ತರೋ, ಜಿಟಿಡಿ ಪುತ್ರನೋ, ಯಾರಿಗೆ ಪಟ್ಟ?
ಜಿಲ್ಲಾ ಕೇಂದ್ರದಿಂದ 45 ಕಿಲೋಮೀಟರ್ ದೂರದಲ್ಲಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಹುಣಸೂರು ಮೈಸೂರು ಜಿಲ್ಲೆಯ ತಾಲೂಕು. ಹುಣಸೂರು ಕ್ಷೇತ್ರದ ರಾಜಕೀಯ ಇತಿಹಾಸ ನೋಡಿದರೆ ಹುಣಸೂರಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳದ್ದೇ ಬಲಪ್ರದರ್ಶನ ನಡೆಯುತ್ತಾ ಬಂದಿದೆ.
ಈವರೆಗೂ 2 ಬಾರಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ದೇವರಾಜ ಅರಸು ಕಾಲದಿಂದಲೂ ಹುಣಸೂರು ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ಹುಣಸೂರಿನಲ್ಲಿ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕರು. ಒಕ್ಕಲಿಗರ ಬಳಿಕ ಕ್ಷೇತ್ರದಲ್ಲಿ ಕುರುಬ, ಎಸ್‌ಟಿ, ಎಸ್ಸಿ ಹಾಗೂ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

2008ರಲ್ಲಿ ಜೆಡಿಎಸ್ ಪಕ್ಷದ ಚಿಕ್ಕಮಾದು ಎದುರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಚ್.ಪಿ. ಮಂಜುನಾಥ್ 15,041 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಇದಾದ ಬಳಿಕ ಮತ್ತೆ 2013 ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ 83,930 ಮತ ಪಡೆದು ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ವಿರುದ್ಧ ಗೆಲುವನ್ನು ಕಂಡಿದ್ದರು.
ಅತಿದೊಡ್ಡ ರಾಜಕೀಯ ಇತಿಹಾಸ ಹೊಂದಿರುವ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಸತತ 3 ಬಾರಿ ಆಯ್ಕೆಯಾಗಿದ್ದರು. 1957, 1962 ಹಾಗೂ 67ರಲ್ಲಿ ಸತತವಾಗಿ ಇದೇ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು ದಿವಂಗತ ದೇವರಾಜ ಅರಸು. 1972ರಲ್ಲಿ ಯು. ಕರಿಯಪ್ಪ ಗೌಡ ಹುಣಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ನಂತರ 1978ರಲ್ಲಿ ಮತ್ತೊಮ್ಮೆ ದೇವರಾಜ ಅರಸು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಬಳಿಕ 1983ರಲ್ಲಿ ಚಂದ್ರಪಭಾ ಜನತಾಪಕ್ಷದಿಂದ ಆಯ್ಕೆಯಾಗಿದ್ದರು. 1985ರಲ್ಲಿ ಹೆಚ್.ಎಲ್. ತಿಮ್ಮೇಗೌಡರು ಜನತಾಪಕ್ಷದಿಂದ ಹುಣಸೂರು ಕ್ಷೇತ್ರದಲ್ಲಿ ಗೆಲುವು ಕಂಡರು. 1989ರಲ್ಲಿ ಚಂದ್ರಪ್ರಭಾ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು.

1994ರಲ್ಲಿ ಮೊದಲ ಬಾರಿಗೆ ಸಿ.ಎಚ್. ವಿಜಯಶಂಕರ್ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. 1999ರಲ್ಲಿ ವಿ. ಪಾಪಣ್ಣ ಮತ್ತೆ ಬಿಜೆಪಿ ಪಕ್ಷದಿಂದ ಗೆದ್ದಿದ್ದರು. 2004ರಲ್ಲಿ ಜಿ.ಟಿ. ದೇವೇಗೌಡ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇದಾದ ಬಳಿಕ ಎಚ್.ಪಿ. ಮಂಜುನಾಥ್ ಸತತ 2 ಬಾರಿ ಗೆಲುವು ಕಂಡಿದ್ದರು.
ಎಚ್.ಪಿ. ಮಂಜುನಾಥ್ ಗೆ ಆಘಾತ
2008 ಹಾಗೂ 2013ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸತತ 2 ಗೆಲುವು ಕಂಡು 2018ರಲ್ಲೂ ಗೆಲ್ಲುವ ನಿರೀಕ್ಷೆಯಲ್ಲಿದ್ದರು ಎಚ್.ಪಿ. ಮಂಜುನಾಥ್. ಆದರೆ 2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಜೆಡಿಎಸ್ ಸೇರ್ಪಡೆಯಾದ ಎಚ್.ವಿಶ್ವನಾಥ್ ಹಾಲಿ ಶಾಸಕರಿಗೆ ಆಘಾತ ನೀಡಿದ್ದರು.
91,667 ಮತ ಪಡೆಯುವ ಮೂಲಕ 8,575 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ವಿರುದ್ಧ ಎಚ್.ವಿಶ್ವನಾಥ್ ಗೆಲುವು ಸಾಧಿಸಿದ್ದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೇರಿ ಅಖಾಡಕ್ಕೆ ಇಳಿದಿದ್ದ ಎಚ್.ವಿಶ್ವನಾಥ್ ವಿರುದ್ಧ ಮತ್ತೊಮ್ಮೆ ಗೆಲುವು ಕಂಡಿದ್ದರು ಎಚ್.ಪಿ. ಮಂಜುನಾಥ್.
ಮಂಜುನಾಥ್ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ
ಇದೀಗ ಕಾಂಗ್ರೆಸ್ ಪಕ್ಷದಿಂದ ಎಚ್.ಪಿ. ಮಂಜುನಾಥ್ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೇ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಪುತ್ರ ಜಿ.ಡಿ.ಹರೀಶ್‌ಗೌಡ ಅಖಾಡ ಪ್ರವೇಶ ಮಾಡಿದ್ದು, ಬಿಜೆಪಿ ಸಾಕಷ್ಟು ಲೆಕ್ಕಾಚಾರವನ್ನು ಹಾಕಿ ಹುಣಸೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲಿದೆ.
ಬಿಜೆಪಿ ಬಾವುಟ ಹಾರಿಸಲು ಕಮಲ ಪಾಳಯ ತಂತ್ರ
ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಕಮಲ ಪಾಳಯ ತಂತ್ರ ರೂಪಿಸುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ಗೆಲುವಿಗಾಗಿ ಸೆಣೆಸಾಟ ಆರಂಭಿಸಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆಯನ್ನ ಲೆಕ್ಕಾಚಾರ ಹಾಕುವುದಾದರೆ ಒಟ್ಟು 2,24,061 ಮತದಾರರು ಈ ಕ್ಷೇತ್ರದಲ್ಲಿದ್ದಾರೆ. 1,11,220 ಮಹಿಳಾ ಮತದಾರರಿದ್ದರೆ, 1,12,841 ಪುರುಷ ಮತದಾರರು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ.
Hunsur Karnataka Elections
| ಪುರುಷರು | 1,12,841 |
| ಮಹಿಳೆಯರು | 1,11,220 |
| ಒಟ್ಟೂ | 2,24,061 |
ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕ
ಹಣಸೂರಿನಲ್ಲಿ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಕ್ಕಲಿಗರ ಬಳಿಕ ಈ ಕ್ಷೇತ್ರದಲ್ಲಿ ಕುರುಬ, ಎಸ್‌ಟಿ-ಎಸ್ಸಿ ಹಾಗೂ ಮುಸ್ಲಿಂ ಮತದಾರರು ಮಹತ್ವದ ಪರಿಣಾಮ ಬೀರಲಿದ್ದಾರೆ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಅಖಾಡದಲ್ಲಿ ಸಂಚಲನ ಸೃಷ್ಟಿಸಿವೆ.
ಹುಣಸೂರಿನ ಮತದಾರ ಪ್ರಭು ಯಾರ ಪರ
ಆದರೆ ಹಳೇ ಮೈಸೂರು ಭಾಗದಲ್ಲಿ ಭರ್ಜರಿ ಗೆಲವಿಗಾಗಿ ರಣತಂತ್ರ ರೂಪಿಸುತ್ತಿರುವ ಕಮಲ ಪಾಳಯದ ನಾಯಕರು, ಹುಣಸೂರು ಕ್ಷೇತ್ರದಲ್ಲಿ ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ತಂತ್ರ ರೂಪಿಸುತ್ತಿದ್ದಾರೆ. ಇಷ್ಟೆಲ್ಲಾ ಲೆಕ್ಕಾಚಾರಗಳ ನಡುವೆ ಅಂತಿಮವಾಗಿ ಹುಣಸೂರಿನ ಮತದಾರ ಪ್ರಭು ಯಾರ ಪರ ತನ್ನ ಒಲವು ತೋರಿಸುತ್ತಾನೆ ಎಂಬುದನ್ನ ಫಲಿತಾಂಶ ಬರುವ ತನಕ ಕಾದು ನೋಡಬೇಕಿದೆ.












Click it and Unblock the Notifications