ನೀರಿಗಾಗಿ ಪರದಾಡುವ ಸಂದರ್ಭದಲ್ಲೂ ಕೆರೆ ಖಾಲಿ ಮಾಡಿಸಿದ ಉಮಚಗಿ ಗ್ರಾಮದ ಜನ, ಈ ನಿರ್ಧಾರ ಯಾಕೆ?
ಹುಬ್ಬಳ್ಳಿ, ಮೇ, 29: ಇದೀಗ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ನೀರಿನ ಅಭಾವ ಎದುರಾಗಿದೆ. ಇದರಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಹುಬ್ಬಳ್ಳಿ ತಾಲೂಕಿನ ಈ ಊರಿನಲ್ಲಿ ಮಾತ್ರ ಜನರು ಕೆರೆ ನೀರು ಖಾಲಿ ಮಾಡಿಸುತ್ತಿದ್ದಾರೆ. ಜನರು ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಕೆರೆಯಲ್ಲಿ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಆದ್ದರಿಂದ ಇಲ್ಲಿನ ಜನರು ಅಧಿಕಾರಿಗಳು ಬೇಡ ಬೇಡ ಅಂದರೂ ಕೆರೆಯಲ್ಲಿ ನೀರಿರುವುದು ಬೇಡವೇ ಬೇಡ ಎನ್ನುತ್ತಿದ್ದಾರೆ. ಹೀಗೆ ಜನರ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯತಿ ಅಧಿಕಾರಿಗಳು ಕೆರೆ ನೀರನ್ನು ಯಂತ್ರಗಳ ಮೂಲಕ ಹೊರ ಚೆಲ್ಲುತ್ತಿದ್ದಾರೆ. 500ಕ್ಕೂ ಹೆಚ್ಚು ಮನೆಗಳಿರುವ 3,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಉಮಚಗಿಯಲ್ಲಿ ವ್ಯಕ್ತಿಯೋರ್ವನ ಆತ್ಮಹತ್ಯೆಯಿಂದ ಇಂತಹದೊಂದು ನಿರ್ಧಾರಕ್ಕೆ ಜನರು ಮುಂದಾಗಿದ್ದಾರೆ.

ಇನ್ನು ಮಲ್ಲಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಮಚಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಸಾಲ ಬಾಧೆ ತಾಳದೆ ಶಂಕರಪ್ಪ ಹುರಳಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ನಂತರ ಕೆರೆಯಲ್ಲಿ ಶವ ತೇಲಿತ್ತು. ಕೊಳೆತ ಸ್ಥಿತಿಯಲ್ಲಿ ಸ್ಥಿತಿಯಲ್ಲಿ ಶವ ಸಿಕ್ಕಿದ್ದರಿಂದ ನೀರು ಕಲುಷಿತಗೊಂಡಿದೆ ಎಂದು ಜನರು ಹೇಳಿದ್ದರು. ಆಗ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀರು ಕಲುಷಿತಗೊಂಡಿಲ್ಲ ಅಂದರೂ ಕೇಳದ ಜನ ಕೆರೆ ನೀರನ್ನು ಖಾಲಿ ಮಾಡಿಸುವಂತೆ ಪಟ್ಟುಹಿಡಿದಿದ್ದಾರೆ.
ಒಟ್ಟಿನಲ್ಲಿ ಗ್ರಾಮಸ್ಥರ ಪಟ್ಟಿಗೆ ಮಣಿದ ಗ್ರಾಮ ಪಂಚಾಯಿತಿ ಯಂತ್ರಗಳ ಮೂಲಕ ಹಗಲು- ರಾತ್ರಿ ನೀರು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಐದಾರು ದಿನಗಳ ನಂತರ ಕೆರೆ ಸಂಪೂರ್ಣ ಖಾಲಿಯಾಗುವ ನಿರೀಕ್ಷೆ ಇದೆ. ಸಾವನ್ನಪ್ಪಿದ ಅನಿಷ್ಟದಿಂದಾಗಿ ಕೆರೆ ಕಲುಷಿತಗೊಂಡಿದೆ. ಬೇರೆ ಊರಿಗೆ ಹೋಗಿ ನೀರು ತಂದರೂ ಪರವಾಗಿಲ್ಲ. ನೀರು ಖಾಲಿ ಮಾಡಿಸಲೇಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿರುವುದು ವಿಪರ್ಯಾಸಕರ ಸಂಗತಿ ಆಗಿದೆ.
ಕುಡಿಯುವ ನೀರಿಗಾಗಿ ಪರದಾಟ
ಮತ್ತೊಂದೆಡೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿಗಾಗಿ ದಿನವೂ ಜನರು ಸರ್ಕಸ್ ಮಾಡುತ್ತಿದ್ದಾರೆ. ಅದೆಷ್ಟೋ ಮನವಿ ಮಾಡಿದರೂ ಕುಡಿಯುವ ನೀರನ್ನು ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಜಲಮಂಡಳಿಯ ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದೆ. ಆದರೆ ಜನರ ಭವಣೆ ಮಾತ್ರ ಕಡಿಮೆ ಆಗಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ಮಾತನ್ನು ಮಾತ್ರ ಪಾಲಿಕೆ ಇನ್ನೂ ಕೈ ಬಿಟ್ಟಿಲ್ಲ.
ಈಗಾಗಲೇ ಹೆಚ್ಚಿದ ತಾಪಮಾನದಿಂದ ಜನರು ಕಂಗಾಲಾಗಿದ್ದು, ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹನಿ ಹನಿ ನೀರಿಗೂ ಹುಬ್ಬಳ್ಳಿ-ಧಾರವಾಡದಲ್ಲಿ ಹಾಹಾಕಾರ ಉಂಟಾಗಿದೆ. ಎಲ್ ಆ್ಯಂಡ್ ಟಿ ಕಂಪನಿಯ ಅವ್ಯವಸ್ಥೆಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನೀರು ಬರುತ್ತಿಲ್ಲ ಎನ್ನುವ ಸಮಸ್ಯೆ ಒಂದು ಕಡೆಯಾದರೇ, ಮತ್ತೊಂದೆಡೆ ಪಾಲಿಕೆಯ ಬೇಜವಾಬ್ದಾರಿಯಿಂದ ಜನರು ಬೇಸತ್ತಿದ್ದಾರೆ.
ಹದಿನೈದು ದಿನ ಕಳೆದರೂ ಹುಬ್ಬಳ್ಳಿ-ಧಾರವಾಡದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಅಲ್ಲದೇ ನವನಗರದ ಕಡೆಯ ಕಾರ್ಮಿಕ ಕಾಲೋನಿ ಹಾಗೂ ಎಪಿಎಂಸಿಯಲ್ಲಿರುವ ಬಸವ ಕಾಲೋನಿಯಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ಜನರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಏತನ್ಮಧ್ಯೆ ಮೊನ್ನೆಯಷ್ಟೇ ಚುನಾವಣೆ ಬಹಿಷ್ಕಾರ ಮಾಡಲು ಕೂಡ ಜನರು ಮುಂದಾಗಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ ಎಂದು ಇಲ್ಲಿನ ನಿವಾಸಿ ದುರ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಹುಬ್ಬಳ್ಳಿಯ ನವ ಅಯೋಧ್ಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಬರುತ್ತಿದ್ದು, ಜನರು ಅನಿವಾರ್ಯತೆಯಿಂದ ಇದೇ ನೀರನ್ನು ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ನೀರು ಸರಬರಾಜಿನಲ್ಲಿ ವಿಳಂಬವಾಗುತ್ತಿದ್ದರೂ ಕೂಡ ಜನರಿಗೆ ಕುಡಿಯಲು ಯೋಗ್ಯವಾದ ನೀರು ಸಿಗಂದಂತಾಗಿದೆ.












Click it and Unblock the Notifications