ಕುಂದಗೋಳ, ಚಿಂಚೋಳಿ ಚುನಾವಣೆ ಗೆಲ್ಲುತ್ತೇವೆ : ಯಡಿಯೂರಪ್ಪ
ಹುಬ್ಬಳ್ಳಿ, ಮೇ 05 : 'ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು. 'ಕಾಂಗ್ರೆಸ್ ಹಣಬಲದ ಮೇಲೆ ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆ ಗೆಲ್ಲಲು ಹೊರಟಿದೆ. ನಾವು ಜನರ ಪ್ರೀತಿ, ವಿಶ್ವಾಸದ ಮೇಲೆ ಗೆಲ್ಲುತ್ತೇವೆ' ಎಂದರು.
'ಕುಂದಗೋಳದಲ್ಲಿ ಇಡೀ ಸರ್ಕಾರ ಬಂದು ಕೂತಿದೆ. ಹಣದ ಹೊಳೆ ಹರಿಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಭ್ರಷ್ಟಾಚಾರ ಮತ್ತು ಕಚ್ಚಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ' ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೇ 19ರಂದು ಧಾರವಾಡ ಜಿಲ್ಲೆಯ ಕುಂದಗೋಳ, ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.....

ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ
'ನಾನು ಸಿಎಂ ಆಗುವ ಕನಸು ಕಾಣುತ್ತಿಲ್ಲ. ಸರ್ಕಾರ ಪತನವಾಗುತ್ತದೆ ಎಂದು ನಮ್ಮ ಪಕ್ಷದ ಮುಖಂಡರು ಯಾರೂ ಹೇಳಬೇಡಿ. ಮೇ 23ರಂದು ದೇಶದ ಮತದಾರರ ತೀರ್ಪಿನ ಮೇಲೆ ಮುಂದಿನ ನಿರ್ಧಾರ ಮಾಡೋಣ. ನಮ್ಮ ಮುಖಂಡರಿಗೆ ಕೈ ಮುಗಿದು ಪ್ರಾರ್ಥನೆ ಮಾಡತ್ತೇನೆ' ಎಂದು ಹೇಳಿದರು.

ಕಿರುಕುಳ ನೀಡಲಾಗುತ್ತಿದೆ
'ರಾಜ್ಯದಲ್ಲಿ ಗೃಹ ಸಚಿವರ ಒತ್ತಡದಿಂದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಮೇ 6ರಂದು ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಗೃಹ ಸಚಿವರು ಅಧಿಕಾರ ದುರುಪಯೋಗ ಮಾಡಿಕೊಳ್ಳವುದನ್ನು ಬಿಡಬೇಕು' ಎಂದು ಯಡಿಯೂರಪ್ಪ ಒತ್ತಾಯಿಸಿದರು.

ರೈತರ ಸಾಲ ಮನ್ನಾ ಮಾಡಬೇಕು
'ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಹತ್ತು ತಿಂಗಳು ಆದರೂ ರೈತರ ಸಾಲಮನ್ನಾ ಆಗಿಲ್ಲ. ಈಗ ರೈತರಿಗೆ ಸಾಂತ್ವನ ಪತ್ರ ಬರೆಯುವುದಾಗಿ ಹೇಳುತ್ತಿರುವುದು ನಗೆಪಾಟಲು' ಎಂದು ಯಡಿಯೂರಪ್ಪ ಹೇಳಿದರು.

ಬರಗಾಲದ ಬಗ್ಗೆ ಗಮನವಿಲ್ಲ
'ಸರ್ಕಾರಕ್ಕೆ ಬರಗಾಲದ ಬಗ್ಗೆ ಗಮನವಿಲ್ಲ. ಕಾಂಗ್ರೆಸ್-ಜೆಡಿಎಸ್ ಭಿನ್ನಾಭಿಪ್ರಾಯ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ಪ್ರಧಾನಿಯನ್ನು ಇಡೀ ವಿಶ್ವವೇ ಗೌರವದಿಂದ ಕಾಣುತ್ತಿದೆ. ಆದರೆ, ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ' ಎಂದು ಯಡಿಯೂರಪ್ಪ ದೂರಿದರು.












Click it and Unblock the Notifications