ಹುಲಿ ಉಗುರು ಪೆಂಡೆಂಟ್ ಕೇಸ್: ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಮನೆಗೆ ಅರಣ್ಯಾಧಿಕಾರಿಗಳ ದಿಢೀರ್ ಭೇಟಿ
ಹುಬ್ಬಳ್ಳಿ, ಅಕ್ಟೋಬರ್, 31: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇರೆಗೆ ಇತ್ತೀಚೆಗಷ್ಟೇ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ಈ ಸಂಬಂಧ ಹಲವು ಸೆಲೆಬ್ರೆಟಿಗಳು, ರಾಜಕಾರಣಿಗಳ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹಾಗೆಯೇ ಹುಬ್ಬಳ್ಳಿಯಲ್ಲಿ ಉದ್ಯಮಿಗಳಿಬ್ಬರು ಹುಲಿ ಉಗುರು ಪೆಂಡೆಂಟ್ ಧರಿಸಿರುರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂದು ಈ ಇಬ್ಬರು ಉದ್ಯಮಿಗಳ ಮನೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಲಯ ಅರಣ್ಯಧಿಕಾರಿ ಆರ್.ಎಸ್.ಉಪ್ಪಾರ ನೇತೃತ್ವದಲ್ಲಿ ಉದ್ಯಮಿಗಳಾದ ವಜ್ರಮುನಿ ಶಿರಕೋಳ, ಅಯ್ಯಪ್ಪ ಶಿರಕೋಳ ಮನೆಗೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎರಡು ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ಇನ್ನು ಉದ್ಯಮಿಗಳು ಇವು ನಕಲಿ ಹುಲಿ ಉಗುರುಗಳು, ಅವುಗಳನ್ನು ಜಾತ್ರೆಯಲ್ಲಿ ಖರೀದಿ ಮಾಡಿದ್ದೇವೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೃತಕ ಹುಲಿ ಉಗುರು ತಯಾರಿಸ್ತಿದ್ದ ಕುಂಟುಂಬಗಳಿಗೀಗ ಆಪತ್ತು
ಅದು ಐದು ದಶಕಗಳ ಕಾಯಕ. ಇದೇ ಅವರಿಗೆ ಜೀವನಾಧಾರ. ಇದರಲ್ಲಿಯೇ ಬದುಕು ಕಂಡುಕೊಂಡವರು. ಬದುಕಿನ ಬಂಡಿ ನೂಗಲು ಸಹ ಸಹಕಾರಿಯಾಗಿತ್ತು. ಆದರೆ ಈಗ ಕೃತಕ ಹುಲಿ ಉಗುರು ಸೇರಿದಂತೆ ಪ್ರಾಣಿಗಳ ವಸ್ತುಗಳನ್ನು ಮಾಡುತ್ತಿದ್ದ ಈ ಹಕ್ಕಿಪಿಕ್ಕಿ ಕುಟುಂಬಗಳಿಗೆ ಸಂಚಕಾರ ತಂದೊಡ್ಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದಲ್ಲಿ ವಾಸವಿರುವ ಹಕ್ಕಿ ಪಿಕ್ಕಿ ಕುಟುಂಬಗಳಿಗೆ ಈಗ ಸಂಕಷ್ಟ ತಂದೊಡ್ಡಿದೆ. ಬಿಗ್ ಬಾಸ್ ಸ್ಪರ್ಧಿ ಹಾಗೂ ರೈತ ಸಂತೋಷ್ ವರ್ತೂರು ಹುಲಿ ಉಗುರು ಪೆಂಟೆಂಡ್ ಧರಿಸಿ ಬಂಧನವಾದ ಬಳಿಕ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ. ಅಷ್ಟೇ ಅಲ್ಲದೆ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡಿದೆ.
ದೊಡ್ಡ ದೊಡ್ಡ ನಟರು, ರಾಜಕಾರಣಿಗಳ ಮಕ್ಕಳು ಸೇರಿದಂತೆ ಹುಲಿ ಉಗುರು ಧರಿಸಿದ್ದವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಅಸಲಿಯೋ ನಕಲಿಯೋ ಎಂದು ಪರಿಶೀಲಿಸಿತ್ತು. ಆದರೆ ಈಗ ಇದನ್ನೇ ನಂಬಿ ಬದುಕುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದವರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.
ಕೃತಕವಾಗಿ ಹುಲಿ ಉಗುರು ತಯಾರಿಸುವ ನೈಪುಣ್ಯತೆಯನ್ನು ಹಕ್ಕಿ ಪಿಕ್ಕಿ ಜನಾಂಗ ಹೊಂದಿದೆ. ಕುಲಕಸುಬು ಕೂಡ ಹೌದು. ಸುಮಾರು 50 ವರ್ಷಗಳಿಂದಲೂ ಕೃತಕ ಹುಲಿ ಉಗುರು ತಯಾರಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದವರಲ್ಲಿಯೂ ಆತಂಕ ಶುರುವಾಗಿದೆ. ಯಾಕೆಂದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ ಇವರ ವಿಳಾಸ ಕೊಡುತ್ತಾರೆ. ಇವರಿಂದ ಖರೀದಿ ಮಾಡಿದ್ದೆ ಎಂಬುದು ಗೊತ್ತಾದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸುವ ಸಾಧ್ಯತೆಯೂ ಇರುತ್ತದೆ.
ಈ ಪ್ರಕರಣ ಗಂಭೀರತೆ ಪಡೆದ ಮೇಲೆ ಕೆಲವರಂತೂ ಹುಲಿ ಉಗುರು ಕೃತಕವೂ ಬೇಡ, ಯಾವುದೂ ಬೇಡ, ಇದರ ಸಹವಾಸವೇ ಬೇಡಪ್ಪ ಅನ್ನೋ ಮಟ್ಟಕ್ಕೆ ಬಂದುಬಿಟ್ಟಿದ್ದಾರೆ. ಅಷ್ಟು ಬಿಗಿ ಕ್ರಮ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ.
ರುದ್ರಾಕ್ಷಿ, ಹರಳು, ಮಸಾಜ್ ಎಣ್ಣೆ ಜೊತೆಗೆ ಹುಲಿ ಉಗುರು, ಹುಲಿ, ಜಿಂಕೆಗಳ ನಕಲಿ ಚರ್ಮ ರೂಪಿಸಿ, ರಾಜ್ಯ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಿಗೂ ಹಕ್ಕಿ ಪಿಕ್ಕಿ ಜನಾಂಗದವರು ಹೋಗಿ ಮಾರಾಟ ಮಾಡುವುದು ವಾಡಿಕೆ. ಕಳೆದೊಂದು ವಾರದಿಂದ ವ್ಯಾಪಾರ ಇಲ್ಲದೇ ಕಂಗೆಟ್ಟು ಹೋಗಿದ್ದಾರೆ. ಇಷ್ಟು ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದೆವು. ಇಷ್ಟವಿದ್ದವರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು. ಆದರೆ ಈಗ ಯಾರೂ ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಸಾಯಿಖಾನೆಗಳಿಂದ ಹಸು- ಎಮ್ಮೆಯ ಕೊರಬು, ಗೊರಸುಗಳನ್ನು ತಂದು ಮೊದಲು ಕ್ಲೀನ್ ಮಾಡಲಾಗುತ್ತದೆ. ಆ ಬಳಿಕ ಯಂತ್ರದಿಂದ ಕತ್ತರಿಸಿ ಹತ್ತು ನಿಮಿಷದಲ್ಲಿಯೇ ಹುಲಿ ಉಗುರಿನಂತೆ ರೂಪ ಕೊಡಲಾಗುತ್ತದೆ. ಆದರೆ ಪೆಂಟೆಂಡ್ ಮಾಡುವುದು ನಮಗೆ ಗೊತ್ತಿಲ್ಲ ಎಂದು ಹಕ್ಕಿ ಪಿಕ್ಕಿ ಜನಾಂಗದವರು ಹೇಳುತ್ತಾರೆ.
ದಿನಕ್ಕೆ ಜಾನುವಾರುಗಳ ಗೊರಸಿನಿಂದ ಏನಿಲ್ಲಾ ಅಂದರೂ 50 ರಿಂದ 60 ಕೃತಕ ಹುಲಿ ಉಗುರು ರೂಪಿಸಬಹುದು. ಇಲ್ಲಿ ತಯಾರಾದ ಕೃತಕ ಹುಲಿ ಉಗುರು ದೇವಸ್ಥಾನಗಳ ಮುಂದೆಯೂ ಮಾರಾಟ ಮಾಡಲಾಗುತ್ತದೆ. ಕಡಿಮೆ ಎಂದರೆ ಜೋಡಿ ಉಗುರುಗಳಿಗೆ 500ರಿಂದ 1 ಸಾವಿರ ರೂಪಾಯಿ ಮೌಲ್ಯವಾಗಿರುತ್ತದೆ.












Click it and Unblock the Notifications