ಹುಬ್ಬಳ್ಳಿ ಜನರಿಗೆ ನಡುಕ ಹುಟ್ಟಿಸಿದ ಮುಸುಕುದಾರಿ ಕಳ್ಳರು, ಇವರ ಟಾರ್ಗೆಟ್ ಕೇಳಿದ್ರೆ ಶಾಕ್ ಆಗುವುದಂತೂ ಗ್ಯಾರಂಟಿ!
ಹುಬ್ಬಳ್ಳಿ, ಜೂನ್, 09: ಅವಳಿನಗರ ಹುಬ್ಬಳ್ಳಿಯಲ್ಲಿ ಮುಸುಕುದಾರಿ ಕಳ್ಳರ ಕಾಟ ಹೆಚ್ಚಾಗಿದ್ದು, ಒಟ್ಟು ಕಳೆದ ವರ್ಷ ಡಿಸೆಂಬರ್‌ನಿಂದ ಇಲ್ಲಿಯವರೆಗೂ 16 ಕಡೆ ಕಳ್ಳತನ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೂ ಕೂಡ ಇದುವರೆಗೂ ಒಬ್ಬ ಕಳ್ಳರು ಕೂಡ ಪೊಲೀಸರ ಬಲೆಗೆ ಬಿದ್ದಿಲ್ಲ ಅನ್ನುವುದೇ ವಿಪರ್ಯಾಸದ ಸಂಗತಿಯಾಗಿದೆ.
ಪ್ರಖ್ಯಾತಿ ಮತ್ತು ಕುಖ್ಯಾತಿ ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೊರಟಿರುವ ಅವಳಿನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕಳೆದ ಆರು ತಿಂಗಳಿನಿಂದ ಕಳ್ಳತನ ನಡೆಸುತ್ತಿರುವ ಮುಸುಕುಧಾರಿ ಚೋರರು ಸ್ಥಳೀಯ ಪೊಲೀಸರ ನಿದ್ದೆಗೆಡಿಸಿದ್ದಾರೆ. ಇದೀಗ ಮುಸುಕುದಾರಿ ಚೋರರ ಬಂಧನ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಮುಖಕ್ಕೆ ಮುಸುಕು ಹಾಕಿಕೊಂಡು ಬರುವ ಕಳ್ಳರು ಪ್ರಮುಖವಾಗಿ ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಶುಕ್ರವಾರ, ಶನಿವಾರವೇ ಇವರು ನಡೆಸುವ ಕಳ್ಳತನಕ್ಕೆ ಮುಹೂರ್ತ ಫಿಕ್ಸ್ ಮಾಡುತ್ತಿರುವ ಮಾಹಿತಿಯೊಂದು ಇದೀಗ ಲಭ್ಯವಾಗಿದೆ. ಈಗಾಗಲೇ ಹುಬ್ಬಳ್ಳಿಯ ಅಶೋಕನಗರ, ಕೇಶ್ವಾಪುರ, ವಿದ್ಯಾನಗರ, ಉಪನಗರ ಹಾಗೂ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ಮುಸುಕುಧಾರಿ ಕಳ್ಳರ ಕರಾಮತ್ತುಗಳ ಪ್ರಕರಣ ದಾಖಲಾಗಿದೆ.
ಈ ಚಾಲಾಕಿ ಕಳ್ಳರ ಬಂಧನಕ್ಕೆ ಮಹಾನಗರದ ಎಲ್ಲ ಠಾಣೆಗಳ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಹೀಗಿದ್ದರೂ ಬಂಧನ ಮಾತ್ರ ಸಾಧ್ಯ ಆಗುತ್ತಿಲ್ಲ. ಅಲ್ಲದೇ ಪೊಲೀಸ್ ಕಮೀಷನರೇಟ್‌ನಿಂದ ಬೀಟ್ ವ್ಯವಸ್ಥೆ ಮತ್ತಷ್ಟು ಬಲಪಡಿಸಿದರೂ ಕೂಡ ಮುಸುಕುದಾರಿ ಚೋರರನ್ನು ಬಂಧಿಸಲು ಮಾತ್ರ ಕಷ್ಟವಾಗುತ್ತಿದೆ.
ಇನ್ನೂ 2022ರ ಡಿಸೆಂಬರ್‌ನಿಂದ ಈವರೆಗೆ ಸುಮಾರು 16 ಕಡೆ ಕಳ್ಳತನ ನಡೆಸಿದ್ದು, ಬರೋಬ್ಬರಿ ಒಂದೂವರೆ ಕೆ.ಜಿ. ಬಂಗಾರದ ಒಡವೆಯನ್ನು ಕದ್ದೊಯ್ದಿದ್ದಾರೆ. ಆರಂಭದಲ್ಲಿ ಒಬ್ಬನೇ ಕಳ್ಳತನ ನಡೆಸುತ್ತಿದ್ದು, ಎರಡು ತಿಂಗಳಿನಿಂದ ಮತ್ತಿಬ್ಬರು ಜೊತೆಯಾಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಂತೆ, ಕಳ್ಳ ಕಣ್ಣುಗಳನ್ನು ಬಿಟ್ಟು ಉಳಿದೆಲ್ಲ ಭಾಗಗಳನ್ನು ಜಾಕೆಟ್, ಕ್ಯಾಪ್, ಮಾಸ್ಕ್, ಹ್ಯಾಂಡ್ ಗ್ಲೌಸ್‌ಗಳಿಂದ ಮುಚ್ಚಿಕೊಂಡಿದ್ದ ಎಂದು ತಿಳಿದುಬಂದಿದೆ.
ಹಾಗೆಯೇ ಎರಡು ಜಾಕೆಟ್, ಚಪ್ಪಲಿ, ಬೆನ್ನಿಗೊಂದು ಬ್ಯಾಗ್, ಕೈಯಲ್ಲಿ ಬ್ಯಾಟರಿ ಹಾಕಿಕೊಂಡ ಗೆಟ್ ಅಪ್‌ನಲ್ಲಿರುವ ಕಳ್ಳರು ಜನರಲ್ಲಿ ಆತಂಕ ಹುಟ್ಟುಹಾಕಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಬೀಗ ಹಾಕಿರುವ ಮನೆಗಳ ಬೀಗವನ್ನು ಸಲೀಸಾಗಿ ಒಡೆದು ಒಳನುಗ್ಗುವ ಕಳ್ಳರು, ಬೀಗ ಒಡೆಯುವ ಮೊದಲು ಬೀಗವನ್ನು ಬಟ್ಟೆಯಿಂದ ಸುತ್ತಿ ಶಬ್ಧ ಬರದಂತೆ ಎಚ್ಚರವಹಿಸುವರು.
ನಂತರ ಅಕ್ಕ-ಪಕ್ಕದ ಮನೆಗಳ ಚಿಲಕವನ್ನು ಹಾಕಿ ಯಾರೂ ಮನೆಯಿಂದ ಹೊರಬರದಂತೆ ಮುನ್ನೆಚ್ಚರಿಕೆಯನ್ನೂ ವಹಿಸುತ್ತಾರೆ. ಬಳಿಕ ಕದ್ದ ಮಾಲನ್ನು ಚೀಲದಲ್ಲಿ ತುಂಬಿಕೊಂಡು ಒಂದಿಷ್ಟು ಸದ್ದಾಗದಂತೆ ತೀರಾ ನಿಧಾನವಾಗಿ ಹೆಜ್ಜೆ ಕಿತ್ತಿಟ್ಟು ಕಾಂಪೌಂಡ್ ಹಾರಿ ಪರಾರಿಯಾಗುವರು. ಹೀಗೆ ಹುಬ್ಬಳ್ಳಿಯಲ್ಲಿ ಕಳ್ಳರ ಗ್ಯಾಂಗ್ ಸಲಿಸಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತದೆ. ಸತತ ಒಂದು ವರ್ಷದಿಂದಲೂ ಪೊಲೀಸರ ಕೈಗೆ ಸಿಗದೇ ಕಣ್ಮರೆಯಾಗುತ್ತಿದ್ದು, ಇದು ಆಶ್ಚರ್ಯವನ್ನು ಉಂಟುಮಾಡಿದೆ.












Click it and Unblock the Notifications