ಗಮನ ಸೆಳೆದ ಸರಕಾರಿ ಶಾಲಾ ವಿದ್ಯಾರ್ಥಿಗಳ ಹಳ್ಳಿ ಸೊಗಡಿನ ಪ್ರದರ್ಶನ
ಹುಬ್ಬಳ್ಳಿ, ಜೂನ್ 1 : ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಸೊಗಡು ಮಾಯವಾಗುತ್ತಿದೆ. ಮಣ್ಣಿನ ಒಲೆ, ಮಣ್ಣಿನ ಮಡಿಕೆಗಳು ಇಂದು ಬಲು ಅಪರೂಪ. ಖಾರ ರುಬ್ಬವ ಕಲ್ಲು ಗುಂಡು, ಧಾನ್ಯ ಶೇಖರಿಸುತ್ತಿದ್ದ ಬಂಡಲ್‌ಗಳು ಆಧುನಿಕತೆಯ ಭರದಲ್ಲಿ ಮೂಲೆಗುಂಪಾಗುತ್ತಿವೆ. ಹಳ್ಳಿಯ ಸಂಪೂರ್ಣ ಚಿತ್ರಣವನ್ನು ತೆರೆದಿಡುತ್ತಿದ್ದ ಅಪೂರ್ವ ದೃಶ್ಯಗಳು ಇಂದು ಇಲ್ಲವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಲ್ಲಿ ಹಳ್ಳಿ ಪರಿಸರದ ಪರಿಕಲ್ಪನೆಯನ್ನು ಅರ್ಥಮಾಡಿಸಲು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದೆ.
ಹಳ್ಳಿ ಸೊಗಡಿನ ಬಗೆಬಗೆಯ ಖಾದ್ಯಗಳ ಗಮ, ಸಂಪ್ರದಾಯ ಉಡುಗೆಯಲ್ಲಿ ಖುಷಿಯ ಸಂಭ್ರಮ, ಚಿನ್ನರ ಮೊಗದಲ್ಲೂ ಹೊಸತನದ ಅನುಭವ. ಶಾಲೆ ಆವರಣದ ತುಂಬೆಲ್ಲಾ ಇಳಕಲ್ ಸೀರೆ ತೊಟ್ಟು ಹೆಣ್ಣು ಮಕ್ಕಳ ಖುಷಿ, ಧೋತರ ಉದ್ದನೆಯ ನಿಲ್ಲುವಂಗಿ ತೊಟ್ಟು ಹುಡುಗರ ಮಸ್ತಿ, ಸದಾ ಆಟ-ಪಾಠ, ತುಂಟಾಟಗಳಿಗೆ ಸಾಕ್ಷಿಯಾಗುತ್ತಿದ್ದ ಶಾಲೆಯಲ್ಲಿ ಹಳ್ಳಿಯ ಲೋಕವೇ ತೆರೆದುಕೊಂಡಿದ್ದು, ನೋಡುಗರ ಕಣ್ಮನ ಸೆಳೆಯಿತು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುತಗಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಲಿಕಾ ಚೇತರಿಕೆಯೊಂದಿಗೆ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಇಳಕಲ್ ಸೀರೆಯುಟ್ಟು ಮಿಂಚುತ್ತಿದ್ದರು. ಕೋವಿಡ್ ಕಾರಣ ಎರಡು ವರ್ಷಗಳಿಂದ ಉಂಟಾಗಿರುವ ಕಲಿಕಾ ಹಿನ್ನಡೆಯಲ್ಲಿ ಸರಿದೂಗಿಸಲು ರಾಜ್ಯ ಸರ್ಕಾರ ಕಲಿಕಾ ಚೇತರಿಕೆ ಹಮ್ಮಿಕೊಂಡಿದ್ದು, ಅದರಂತೆ ಸುತಗಟ್ಟಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿನೂತನವಾದ ಚಟುವಟಿಕೆಯೊಂದಿಗೆ 2022-23 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಿದರು.

ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ಹಳ್ಳಿಗರಂತೆ ಕೈಯಿಂದ ಧಾನ್ಯಗಳ ಹಸ ಮಾಡಿ, ಅದನ್ನು ಕುಟ್ಟಿ ಹಿಟ್ಟು ಮಾಡಿದರು. ನಂತರ ಒಲೆವೊಡ್ಡಿ ರೊಟ್ಟಿ ಬಡಿದರು. ಸೌದೆಗಳಲ್ಲಿ ಒಲೆ ಹೊತ್ತಿಸಿ, ಉತ್ತರ ಕರ್ನಾಟಕದ ತರಹವೇವಾರಿ ಅಡುಗೆ ಮಾಡಿ ಖುಷಿಪಟ್ಟರೇ, ಇತ್ತ ವಿದ್ಯಾರ್ಥಿಗಳು ರೈತನಾಗಿ ಹೊಲದಲ್ಲಿ ಎತ್ತುಗಳಿಂದ ಉಳುಮೆ ಮಾಡಿ, ಕಳೆ ತೆಗೆದರು.

ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲೆ ಎಂಬುದು ಕೇವಲ ಶಾಲೆಯಾಗದೇ ಅರಿವಿನ ಬುತ್ತಿಯನ್ನು ನೀಡಬೇಕು. ಇದೇ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications