Shakti Scheme effect: ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಸರ್ಕಾರದ ಮಂದಿಟ್ಟ ಬೇಡಿಕೆಗಳೇನು?, ಇಲ್ಲಿದೆ ವಿವರ
ಧಾರವಾಡ, ಜುಲೈ, 31: ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಾವು ಸಂಕಷ್ಟಕ್ಕೆ ಒಳಗಾಗಿದ್ದೇನೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದರು. ಅಲ್ಲದೆ ಕೆಲವೆಡೆ ಪ್ರತಿಭಟನೆಯನ್ನು ಮಾಡಿದ್ದರು. ಹಾಗೆಯೇ ಇದೀಗ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದು ಆಟೋ ಚಾಲಕರ ದುಡಿಮೆಯ ಮೇಲೆ ಹೊಡೆತ ಬಿದ್ದಿದೆ. ಆಟೋ ರಿಕ್ಷಾ ಚಾಲಕರು ಸಂಕಷ್ಟದಲ್ಲಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಪರಿಗಣಿಸಿ ಆಟೋ ರಿಕ್ಷಾ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಟೋ ಚಾಲಕರ ಸಾಲ ಮನ್ನಾ ಮಾಡಬೇಕು, ಆಟೋ ಚಾಲಕರಿಗೆ ಅಪಘಾತ ವಿಮೆ ನೀಡಬೇಕು. ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು, ಆಟೋ ಚಾಲಕರ ಕಾಲೋನಿ ನಿರ್ಮಾಣ ಮಾಡಬೇಕು, ಅಟೋ ಚಾಲಕರ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು ಹಾಗೂ ಸಹಾಯಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.












Click it and Unblock the Notifications