IPS Transfer; ಅವಳಿ ನಗರಕ್ಕೆ ಮೊದಲ ಮಹಿಳಾ ಆಯುಕ್ತರ ನೇಮಕ
ಹುಬ್ಬಳ್ಳಿ, ಆಗಸ್ಟ್ 09; ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಗೃಹ ಇಲಾಖೆಯ ವರ್ಗಾವಣೆಯ ಆದೇಶ ಪ್ರಕಟವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸ್ ಆಯುಕ್ತರಾಗಿ ರೇಣುಕಾ ಕೆ. ಸುಕುಮಾರ ನೇಮಕಗೊಂಡಿದ್ದಾರೆ.
ಬುಧವಾರ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ಆದೇಶ ಹೊರಡಿಸಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಹೊಸ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ. ಕೆಲವು ದಿನಗಳಿಂದ ಅವಳಿ ನಗರದ ಪೊಲೀಸ್ ಆಯುಕ್ತರ ಹುದ್ದೆ ಖಾಲಿ ಇತ್ತು.

2011ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ರೇಣುಕಾ ಕೆ. ಸುಕುಮಾರ ಈ ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಅವರನ್ನು ಅವಳಿ ನಗರ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ.
ಮೊದಲ ಮಹಿಳಾ ಆಯುಕ್ತೆ; ರೇಣುಕಾ ಕೆ. ಸುಕುಮಾರ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನ ಮೊದಲ ಮಹಿಳಾ ಪೊಲೀಸ್ ಆಯುಕ್ತರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಹುಬ್ಬಳ್ಳಿ-ಧಾರವಾಡದ ಪ್ರಭಾರಿ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಂತೋಷ್ ಬಾಬು ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಗೊಂಡಿರುವ ರೇಣುಕಾ ಕೆ. ಸುಕುಮಾರ ಡೆಪ್ಯೂಟಿ ಕಮಾಂಡೆಂಟ್ ಜನರಲ್, ಹೋಂ ಗಾರ್ಡ್ ಮತ್ತು ಡೆಪ್ಯೂಟಿ ಡೈರೆಕ್ಟರ್ ಆಫ್ ಸಿವಿಲ್ ಡಿಫೆನ್ಸ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ರೇಣುಕಾ ಕೆ. ಸುಕುಮಾರ ಈ ಹಿಂದೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಉಪ ಪೊಲೀಸ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ)ದಲ್ಲಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.
ಅಧಿಕಾರ ಸ್ವೀಕಾರ; ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸ್ ಆಯುಕ್ತರಾಗಿ ರೇಣುಕಾ ಕೆ. ಸುಕುಮಾರ ಗುರುವಾರ ಅಧಿಕಾರವಹಿಸಿಕೊಂಡರು. ಬಳಿಕ ಮಾತನಾಡಿ, "ಈ ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಈಗಿರುವ ಅಧಿಕಾರಿಗಳಲ್ಲಿ ಬಹುತೇಕರು ಹಿರಿಯರು. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಅನುಕೂಲವಾಗಲಿದೆ" ಎಂದರು.
"ಸರ್ಕಾರ ದೊಡ್ಡ ಜವಬ್ದಾರಿಯನ್ನು ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು". ರೇಣುಕಾ ಕೆ. ಸುಕುಮಾರ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನ ಮೊದಲ ಮಹಿಳಾ ಪೊಲೀಸ್ ಆಯುಕ್ತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಆಯುಕ್ತರಾಗಿದ್ದ ರಮಣ್ ಗುಪ್ತಾ ವರ್ಗಾವಣೆ ಬಳಿಕ ಪೊಲೀಸ್ ಆಯುಕ್ತರ ಹುದ್ದೆಯನ್ನು ಪ್ರಭಾರದಲ್ಲಿ ಮುಂದುವರೆಸಲಾಗಿತ್ತು. ಸಂತೋಷ ಬಾಬು ಪ್ರಭಾರ ಆಯುಕ್ತರಾಗಿದ್ದರು. ಸರ್ಕಾರ ಬುಧವಾರ ರೇಣುಕಾ ಕೆ. ಸುಕುಮಾರ ಅವರನ್ನು ಆಯುಕ್ತರಾಗಿ ನೇಮಿಸಿತ್ತು.












Click it and Unblock the Notifications