Vande Bharat Train: ಪುಣೆ-ಬೆಳಗಾವಿ, ಬೆಂಗಳೂರು-ಧಾರವಾಡ ರೈಲು ಟಿಕೆಟ್ ದರ ಇಳಿಕೆ?: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಸೆಪ್ಟಂಬರ್ 17: ಪುಣೆಯಿಂದ ಬೆಳಗಾವಿವರೆಗೆ ಅತೀ ವೇಗ ಮತ್ತು ಐಶಾರಾಮಿ ಸಾರಿಗೆ ಸೇವೆ ನೀಡುವ ವಂದೇ ಭಾರತ್ ರೈಲು ( Vande Bharat Express Train) ಸಂಚಾರಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ. ಅದೇ ರೀತಿ ಬೆಂಗಳೂರು- ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಣೆಗೆ ಮನವಿ ಮಾಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಪುಣೆಯಿಂದ ಬೆಳಗಾವಿವರೆಗಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಅವರು ಪ್ರಯಾಣಿಕರ ಜೊತೆಗೆ ರೈಲು ಪ್ರಯಾಣ ಮಾಡಿದರು. ಪ್ರಯಾಣದ ಅನುಭವ ಹಂಚಿಕೊಂಡರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿ, ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ವಿಸ್ತರಣೆ, ಟಿಕೆಟ್ ದರ ಇಳಿಕೆ ಕುರಿತು ಅಪ್ಡೇಟ್ ಕೊಟ್ಟರು.

ಪುಣೆಯಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲಿನ ಬೇಡಿಕೆ ಬಹುದಿನಗಳಿಂದ ಇತ್ತು. ನಾನು ಸಂಸದನಾದ ನಂತರ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದೆ. ಈಗ ವಂದೇ ಭಾರತ್ ರೈಲು ಆರಂಭಿಸಲಾಗಿದ್ದು, ನಾನು ಸ್ಬಾಗತಿಸುತ್ತೇನೆ ಎಂದರು.
ವಂದೆ ಭಾರತ್ ರೈಲು ಟಿಕೆಟ್ ಬೆಲೆ ಇಳಿಕೆ?
ಅದೇ ರೀತಿ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಿಸುವಂತೆ ಸಹ ಮನವಿ ಮಾಡಲಾಗಿದೆ. ಈ ರೈಲು ಸಂಚಾರ ಆರಂಭವಾದದಲ್ಲಿ ವೇಳಾಪಟ್ಟಿಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಮಾರ್ಗದ ವಂದೇ ಭಾರತ್ ಟಿಕೆಟ್ ದರ ಕಡಿಮೆ ಮಾಡುವಂತೆ ಸಂಬಂಧಿಸಿದವರಿಗೆ ಮನವಿ ಮಾಡಲಾಗುವುದು ಎಂದರು.
ಕೊಲ್ಲಾಪುರಕ್ಕೂ ವಂದೇ ಭಾರತ್ ರೈಲು ಬರಬೇಕು ಎಂಬುದು ಅಲ್ಲಿನ ಜನರು, ರಾಜಕೀಯ ಮುಖಂಡರ ಬೇಡಿಕೆ ಇಟ್ಟಿದ್ದರು. ಹೀಗಾಗಿ ವಾರದಲ್ಲಿ ಮೂರು ದಿನ ಆ ಮಾರ್ಗವಾಗಿ ರೈಲು ಸಂಚಾರ ಮಾಡುತ್ತದೆ. ಮುಂದಿನ ದಿನಗಳಲ್ಲಿ ಈ ಹಿಂದೆ ನಿಗದಿ ಮಾಡಿದಂತೆ ವಾರದಲ್ಲಿ ಆರು ದಿನ ಹುಬ್ಬಳ್ಳಿ-ಪುಣೆ ನಡುವೆ ಸಂಚರಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದರು.
ವಂದೇ ಭಾರತ್ ರೈಲಿನಲ್ಲಿ ಶೆಟ್ಟರ್ ಪ್ರಯಾಣ
ಪುಣೆ ಬೆಳಗಾವಿ ವಂದೇ ಭಾರತ್ ರೈಲಿನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಯಾಣ ಮಾಡಿದರು. ಪುಣೆ ರೈಲು ನಿಲ್ದಾಣದಿಂದ ಹೊರಟ ರೈಲು ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಿತು. ಜನರಿಗೆ ಅತೀ ವೇಗದ ಮತ್ತು ಸುರಕ್ಷಿತ ಹಾಗೂ ಐಶಾರಾಮಿ ಅನುಭವ ನೀಡುವ ರೈಲು ಪ್ರಯಾಣ ಇದಾಗಿದೆ. ಈ ರೈಲು ಹೈಟೆಕ್ ತಂತ್ರಜ್ಞಾನ ಒಳಗೊಂಡಿದೆ. ವಿಶೇಷ ಅನುಭವ ನೀಡುತ್ತದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು. ಅವರ ರೈಲು ಪ್ರಯಾಣದ ವೇಳೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.












Click it and Unblock the Notifications