Hubballi Violence Reason : ಹುಬ್ಬಳ್ಳಿ ಗಲಭೆ; ಪ್ರಚೋದನಕಾರಿ ಸ್ಟೇಟಸ್, ಯುವಕನ ಬಂಧನ
ಹುಬ್ಬಳ್ಳಿ, ಏಪ್ರಿಲ್ 17; ಯುವಕ ವಾಟ್ಸಪ್‌ನಲ್ಲಿ ಎಡಿಟ್ ಮಾಡಿದ ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಅಭಿಷೇಕ್ ಹಿರೇಮಠ ಎಂದು ಗುರುತಿಸಲಾಗಿದೆ. ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ ಅಭಿಷೇಕ್ ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ.
ಈ ವಿವಾದಿತ ಎಡಿಟ್ ಮಾಡಿದ ಪೋಸ್ಟರ್ ಕುರಿತು ಹುಬ್ಬಳ್ಳಿ ಅಂಜುಮನ್ ಸಮಿತಿಗೆ ಮಾಹಿತಿ ಬಂದ ಬಳಿಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರು ಗುಂಪು ಸೇರಿದ್ದರು. ಆಗ ಪೊಲೀಸರು ಮತ್ತು ಒಂದು ಕೋವಿನ ಜನರ ನಡುವೆ ವಾಗ್ವಾದ ನಡೆದಿತ್ತು.

ಜನರು ಪೊಲೀಸರು ಮತ್ತು ಆಸ್ಪತ್ರೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಹಳೇ ಹುಬ್ಬಳ್ಳಿ ನಿವಾಸಿ ಮೊಹಮ್ಮದ್ ಅಜರ್ ಬೇಲೇರಿ ನೀಡಿದ ದೂರಿನ ಅನ್ವಯ ಅಭಿಷೇಕ್ ಹಿರೇಮಠ ಬಂಧಿಸಲಾಗಿದೆ.
ಶಾಂತಿ ಕಾಪಾಡಲು ಮನವಿ; ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, "ಸಾಮಾಜಿಕ ಜಾಲತಾಣದಲ್ಲಿಅವಹೇಳನಕಾರಿ ಪೋಸ್ಟರ್ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಗಲಾಟೆಯ ಹಿಂದಿರುವ ವ್ಯಕ್ತಿಗಳ ಕುರಿತು ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಲ್ಲರೂ ಶಾಂತಿ ಕಾಪಾಡಲು ಒತ್ತು ನೀಡಬೇಕು" ಎಂದು ಮನವಿ ಮಾಡಿದ್ದಾರೆ.
ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ಸಮೀಪದಲ್ಲಿಯೇ ಕಲ್ಲು ತೂರಾಟ ನಡೆದಿದೆ. ಅಶ್ರುವಾಯು ಸಿಡಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ನಾಲ್ವರು ಪೊಲೀಸರು ಗಾಯಗೊಂಡಿದ್ದು, ಪೊಲೀಸರ ವಾಹನಗಳು ಜಖಂಗೊಂಡಿದೆ.

ಈ ಘಟನೆ ಕುರಿತು 30ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಮಹಿಳಯರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ, ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದರು. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಹಿಳಾ ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಗೃಹ ಸಚಿವರ ಪ್ರತಿಕ್ರಿಯೆ; ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು. "ಹಳೇ ಹುಬ್ಬಳ್ಳಿಯಲ್ಲಿ ದಾಂಧಲೆ ಕೆಜಿ ಹಳ್ಳಿ, ಡಿಜೆ ಹಳ್ಳಿ ರೀತಿಯೇ ಆಗಿದೆ. ಪರಿಸ್ಥಿತಿ ಹದ್ದುಬಸ್ತಿಗೆ ತರಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ" ಎಂದು ಹೇಳಿದರು.
ಭಾನುವಾರ ಹೊಸಪೇಟೆಯಲ್ಲಿ ಗೃಹ ಸಚಿವರು ಮಾತನಾಡಿ, "ಗಲಭೆಗೆ ಕಾರಣವಾದ ಪೋಸ್ಟರ್ ಹಾಕಿದವನು ಸೇರಿದಂತೆ 25ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ" ಎಂದರು.
"ಯುವಕ ಮೊಬೈಲ್‌ನಲ್ಲಿ ವಿವಾದಿತ ಪೋಸ್ಟ್ ಹಾಕಿದ್ದರಿಂದ ಗಲಭೆ ಉಂಟಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರು ಯಾವುದೇ ಧರ್ಮದವರಾದರೂ ಬಿಡುವ ಮಾತೇ ಇಲ್ಲ" ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
"ಇದೊಂದು ವ್ಯವಸ್ಥಿತ ಸಂಚಿನಂತೆ ಕಾಣುತ್ತದೆ. ನನಗೆ ಬಂದ ಮಾಹಿತಿ ಪ್ರಕಾರ ಮೊದಲೇ ಅಲ್ಲಿ ಕಲ್ಲು ಸಂಗ್ರಹ ಮಾಡಲಾಗಿತ್ತು. ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿದ್ದಾರೆ. ಓರ್ವ ಪಿಎಸ್‌ಯ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ" ಎಂದು ಗೃಹ ಸಚಿವರು ವಿವರಿಸಿದರು.
ಸ್ಥಳಕ್ಕೆ ಭದ್ರಾವತಿಯಿಂದ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲಾಗಿದೆ. ಭಾನುವಾರ ರಜೆ ಹಾಕಿದ್ದ ಪೊಲೀಸರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ.












Click it and Unblock the Notifications