ದೇಶದ ವಿವಿಧ ಕಡೆ ಪ್ರತಿಭಟನೆ; ಹುಬ್ಬಳ್ಳಿಯಲ್ಲಿ ಪೊಲೀಸರ ಶಾಂತಿಸಭೆ
ಹುಬ್ಬಳ್ಳಿ, ಜೂನ್ 12 : ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ನೂಪೂರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೆಲವು ಕಡೆ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ಪೊಲೀಸರು ಶಾಂತಿ ಸಭೆ ನಡೆಸಿದರು.
ಪ್ರತಿಭಟನೆ, ಹಿಂಸಾಚಾರ ಹಿನ್ನಲೆಯಲ್ಲಿ ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಹುಬ್ಬಳ್ಳಿ ಧಾರವಾಡದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಿಗೆ ನೀಡಿದ್ದು ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ಈಗಾಗಲೇ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಂಡು ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಶಾಂತವಾಗಿದ್ದು ನಿಯಂತ್ರಣದಲ್ಲಿದೆ. ಆದರೂ ಜಾಗೃತವಾಗಿರಬೇಕೆಂದು ಸೂಚಿಸಿದ್ದೇವೆ" ಎಂದರು.

"ಪ್ರತಿಯೊಂದು ಠಾಣೆಯ ಸಿಪಿಐ ಉಸ್ತುವಾರಿ ಮಾಡಿ, ಎಲ್ಲ ಸಮುದಾಯದವರ ಜೊತೆ ಸೌಹಾರ್ದಯುತ ವಾತಾವರಣ ನಿರ್ಮಿಸುವಂತೆ ಮಾತುಕತೆ ನಡೆಸಲು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಹಾಗೂ ಧಾರವಾಡ ಎಸ್‌ಪಿ ಜೊತೆಯೂ ಚರ್ಚೆ ನಡೆಸಿದ್ದೇನೆ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸೂಚನೆಯ ಮೇರೆಗೆ ಹುಬ್ಬಳ್ಳಿ- ಧಾರವಾಡ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಇನ್ಸ್‌ಪೆಕ್ಟರ್‌ಗಳು ಕಾರ್ಯಪ್ರವರ್ತರಾಗಿದ್ದು ತಮ್ಮ ವ್ಯಾಪ್ತಿಯ ಎಲ್ಲಾ ಹಿಂದೂ-ಮುಸ್ಲಿಂ ಸಮಾಜದ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸಿ ಸೌಹಾರ್ದತೆ ಕಾಪಾಡುವಂತೆ ಸೂಚನೆ ನೀಡುತ್ತಿದ್ದಾರೆ.

ನಗರದ ಗೋಕುಲ ರೋಡ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ತಮ್ಮ ವ್ಯಾಪ್ತಿಯ ಎಲ್ಲಾ ಸಮಾಜದ ಮುಖಂಡರನ್ನು ಕರೆಯಿಸಿದ್ದರು. "ದೆಹಲಿ ಮತ್ತು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಪ್ರತಿಭಟನೆ ವೇಳೆ ಹೆಸರಿನಲ್ಲಿ ಕೋಮು ಗಲಭೆ ಹಿನ್ನಲೆ ಹೆಚ್ಚಾಗುತ್ತಿದೆ. ಹಾಗಾಗಿ ಇಂತಹ ವಿಷಯಗಳ ಕುರಿತು ತಮ್ಮ ಏರಿಯಾಗಳಲ್ಲಿ ಚರ್ಚೆ ಮಾಡುವುದು , ವಾಗ್ವಾದ ಮಾಡುವುದು ಮಾಡಬಾರದು. ಓಣಿಯಲ್ಲಿ ಎಲ್ಲರೂ ಸೌಹಾರ್ದತವಾಗಿ ಸಹೋದರಂತೆ ಬಾಳಬೇಕು" ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications