ದೇಶದ ಸುರಕ್ಷತೆ ದೃಷ್ಟಿಯಿಂದ ಪಿಎಫ್‌ಐ ನಿಷೇಧ ಅವಶ್ಯಕತೆಯಿತ್ತು: ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ, ಸೆಪ್ಟೆಂಬರ್ 28 : ನವರಾತ್ರಿ ಹಬ್ಬದ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ದೇಶದ ಸುರಕ್ಷತೆಯ ದೃಷ್ಟಿಯಿಂದ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದ್ದು ಅತ್ಯಂತ ಆನಂದದಾಯಕ ವಾತಾವರಣವನ್ನು ನಿರ್ಮಾಣ ಮಾಡಿದೆ, ಸುರಕ್ಷತೆ ದೃಷ್ಟಿಯಿಂದ ಪಿಎಫ್‌ಐ ನಿಷೇಧ ಅವಶ್ಯಕತೆಯಿತ್ತು. ಈ ತೀರ್ಮಾನವನ್ನು ನಾನು ಅಭಿನಂದಿಸುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಭಾರತದ ಸುರಕ್ಷತೆಯ ಹಿನ್ನೆಲೆಯಲ್ಲಿ ಪಿಎಫ್ಐ ಬ್ಯಾನ್ ಮಾಡಬೇಕಿತ್ತು. ಕಳೆದ ಹದಿನೈದು ವರ್ಷಗಳ ನಮ್ಮ ಬೇಡಿಕೆ ಈಗ ಈಡೇರಿದೆ. ಪಿಎಫ್‌ಐ ಅಂತಹ ಸಮಾಜ ಕಂಟಕವಾಗಿದ್ದ ಸಂಘಟನೆಯನ್ನು ಮೊದಲೇ ನಿಷೇಧಿಸಬೇಕಿತ್ತು. ತಡವಾದರೂ ಕೂಡ ದೇಶಕ್ಕೆ ಅಪಾಯಕಾರಿಯಾದ ಸಂಘಟನೆಯನ್ನು ತಡವಾದರೂ ನಿಷೇಧಿಸಿದ್ದನ್ನು ಸ್ವಾಗತಿಸುತ್ತೇನೆ ಎಂದರು.
ಮುಸ್ಲಿಂ ಸಮಾಜದ ಜನ ಇದರಿಂದ ಪಾಠ ಕಲಿಯಬೇಕು. ಇನ್ನೂ, ಮುಸ್ಲಿಂ ಹಿರಿಯರು ತಮ್ಮ ಯುವಕರು ಯಾವ ಕಡೆಗೆ ಹೋಗುತ್ತಿದ್ದಾರೆ. ಇಂತಹ ಸಮಾಜ ಘಾತುಕ ಸಂಘಟನೆಗಳಲ್ಲಿ ಭಾಗಿಯಾಗಿ ಎಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಅರಿತು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಹಾಗೂ ಇಂತಹ ವಿಷಯಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಈ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು ಈ ದೇಶಕ್ಕೆ ಬದ್ದರಾಗಿರಬೇಕು. ಪಾಕಿಸ್ತಾನಕ್ಕೆ ಹಾಗೂ ಇಸ್ಲಾಂ ಮಾಡಲು ಹೊರಟಿರುವ ಈ ರೀತಿಯ ಮಾಡಲು ಹೊರಟಿರುವ ವಿಕೃತಿಯನ್ನು ತಡೆಯುವಂತಹ ಕೆಲಸವನ್ನು ಮುಸ್ಲಿಂ ಮುಖಂಡರು ಮಾಡಬೇಕು. ಈ ರೀತಿಯ ಮಾನಸಿಕ ಪರಿವರ್ತನೆ ಮಾಡುವಂತಹ ಕೆಲಸಗಳನ್ನು ಮದರಸಾಗಳಲ್ಲೂ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
ಕಳೆದ ನಾಲ್ಕೈದು ದಿನಗಳಿಂದ ಎರಡು ಬಾರಿ ದೇಶಾದ್ಯಂತ ಎರಡು ದಿನಗಳ ಕಾಲ ಪಿಎಫ್‌ಐ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ಎನ್‌ಐಎ ಮತ್ತು ರಾಜ್ಯ ಪೊಲೀಸ್ ಪಡೆ ದಾಳಿ ಮಾಡಿ 100 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಟಡೆಸಿತ್ತು. ಇದರ ಬೆನ್ನಲ್ಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ 8 ಅಂಗ ಸಂಸ್ಥೆಗಳನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿದೆ.
ಪಿಎಫ್‌ಐ ನಿಷೇಧಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ವರ್ಷಗಳಿಂದಲೂ ಬೇಡಿಕೆಯಿಟ್ಟಿದ್ದವು. ಈ ಸಂಘಟನೆಯ ವ್ಯವಹಾರಗಳ ಮೇಲೆ ಗಮನ ಇಟ್ಟು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ನಂತರ ಕೇಂದ್ರ ಸರಕಾರ ನಿಷೇಧದ ನಿರ್ಧಾರ ಮಾಡಿದೆ.
ಪಿಎಫ್‌ಐ ಹೆಸರಲ್ಲಿ ಸಭೆ ನಿಷೇಧ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆ ಹೆಸರನ್ನು ಬಳಸಿಕೊಂಡು ಯಾವುದೇ ಸಭೆ, ಹೋರಾಟ ಮಾಡುವುದು ಇನ್ನು ಮುಂದೆ ಕಾನೂನು ಬಾಹಿರವಾಗಲಿದೆ. ಪಿಎಫ್‌ಐ ಹೆಸರಿನಲ್ಲಿ ಯಾವುದೇ ಕೆಲಸ ಮಾಡಿದರೂ ಕಾನೂನುಬಾಹಿರ ಚಟುವಟಿಕೆಗಳ (ನಿರ್ಬಂಧ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.
ಪಿಎಫ್ಐ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಈಗಾಗಲೇ ಜಪ್ತಿಯಾಗಿದೆ, ಸಂಘಟನೆಗಳು ಕಚೇರಿಗಳಿಗೆ ಬೀಗಮುದ್ರೆ ಬೀಳಲಿದೆ. ಸಂಘಟನೆ ಹೆಸರಿನಲ್ಲಿ ಅಥವಾ ಇನ್ಯಾವುದೇ ಸ್ವರೂಪದ ಕಾರ್ಯಕ್ರಮಗಳ ಮೇಲೆ ಪೊಲೀಸ್ ಮತ್ತು ಗುಪ್ತಚರ ಇಲಾಖೆ ನಿಗಾ ಇಡಲಿದೆ. ಯುಎಪಿಎ ಅಡಿಯಲ್ಲಿ ನಿಷೇಧ ಆದ್ದರಿಂದ ಸಂಘಟನೆಯಲ್ಲಿ ಗುರುತಿಸಿಕೊಂಡವರಿಗೆ ಸಂಕಷ್ಟವಾಗಲಿದೆ. ಸಣ್ಣ ಮಟ್ಟದ ಶಂಕೆ ಬಂದರೂ ಅವರು ಬಂಧನಕ್ಕೆ ಒಳಪಡಿಸಲಾಗುತ್ತದೆ. ಸಂಘಟನೆಗೆ ಸಹಾನುಭೂತಿ ತೋರಿಸುವುದು ಬೆಂಬಲಿಸುವುದು ಕೂಡ ಅಪರಾಧ ಎಂದೇ ಪರಿಗಣಿಸಲಾಗುತ್ತದೆ.












Click it and Unblock the Notifications