Vande Bharat; ಹುಬ್ಬಳ್ಳಿ-ಬೆಳಗಾವಿ ಸಂಪರ್ಕಿಸಲು ಬಸ್, ವೇಳಾಪಟ್ಟಿ
ಹುಬ್ಬಳ್ಳಿ, ಜೂನ್ 30: ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಸಿಕ್ಕಿದೆ. ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಆದರೆ ಹುಬ್ಬಳ್ಳಿ-ಕುಂದಾನಗರಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ.
ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (NWKRTC) ಸಂಸ್ಥೆ ಹುಬ್ಬಳ್ಳಿ- ಬೆಳಗಾವಿ ಸಂಪರ್ಕಿಸಲು ಐಷಾರಾಮಿ ಬಸ್ ಓಡಿಸಲಿದೆ. ಅದೂ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಬಸ್ ಓಡಿಸಲಾಗುತ್ತಿದೆ.

ಜೂನ್ 30ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಗಾವಿ ತನಕ ಮಲ್ಪಿ ಆಕ್ಸೆಲ್ ಐಷಾರಾಮಿ ಬಸ್ ಸಂಚಾರ ನಡೆಸಲಿದೆ. ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ಬೆಳಗಾವಿಗೆ ಹೋಗುವ ಪ್ರಯಾಣಿಕರು ಬಸ್ ಮೂಲಕ ಸಂಚಾರ ನಡೆಸಬಹುದಾಗಿದೆ.
ವೇಳಾಪಟ್ಟಿ; ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿ ನಡುವಿನ ಐಷಾರಾಮಿ ಬಸ್ ಸೇವೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ ರೈಲು ನಿಲ್ದಾಣದಿಂದ 12.30ಕ್ಕೆ ಹೊರಡುವ ಬಸ್ 2.20ಕ್ಕೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿಯಿಂದ 11.15ಕ್ಕೆ ಹೊರಡುವ ಬಸ್, 1.15ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಈ ಮೂಲಕ ಬಸ್ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿ ಸಂಪರ್ಕಿಸಲಿದೆ.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚಾರ ನಡೆಸಲಿದೆ. ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆ ಹೊಂದಿದೆ.
ವಂದೇ ಭಾರತ್ ಪ್ರಯಾಣಿಕರಿಗಾಗಿಯೇ ಒಟ್ಟು 2 ಬಸ್‌ಗಳನ್ನು ಓಡಿಸಲಾಗುತ್ತಿದೆ. ಒಂದು ಬಸ್ 11.15ಕ್ಕೆ ಬೆಳಗಾವಿಯಿಂದ ಹೊರಟು 1.15ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ 1.40ಕ್ಕೆ ಬೆಂಗಳೂರಿಗೆ ಹೊರಡಲಿದೆ. ಬೆಳಗ್ಗೆ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹುಬ್ಭಳ್ಳಿಗೆ ಬರುವ ಜನರು ಬೆಳಗಾವಿಗೆ ಐಷಾರಾಮಿ ಬಸ್ ಮೂಲಕ ಸಾಗಬಹುದು.
ಧಾರವಾಡ ಮತ್ತು ಬೆಳಗಾವಿ ನಡುವೆ ನೇರ ರೈಲು ಮಾರ್ಗ ನಿರ್ಮಾಣವಾದ ಬಳಿಕ ವಂದೇ ಭಾರತ್ ರೈಲು ಸೇವೆ ಆರಂಭಿಸುವುದಾಗಿ ಭರವಸೆ ಸಿಕ್ಕಿದೆ. ಅಲ್ಲಿಯ ತನಕ ಬೆಳಗಾವಿಗೆ ಬೆಂಗಳೂರಿನಿಂದ ವಂದೇ ಭಾರತ್ ರೈಲು ಸಂಚಾರ ಆರಂಭವಾಗುವುದು ಅನುಮಾನವಾಗಿದೆ.
ಪರಿಷ್ಕರಣೆ ಬಳಿಕ ದರಗಳು ಹೀಗಿವೆ. ಕೆಎಸ್ಆರ್ ಬೆಂಗಳೂರು-ಯಶವಂತಪುರ ಎಸಿ ಚೇರ್ ಕಾರ್ 365, ಎಕ್ಸಿಕ್ಯುಟಿವ್ ಕ್ಲಾಸ್ 690 ರೂ.ಗಳು. ಕೆಎಸ್ಆರ್ ಬೆಂಗಳೂರು-ದಾವಣಗೆರೆ ಎಸಿ ಚೇರ್ ಕಾರ್ 935 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1760 ರೂ.ಗಳು.
ಕೆಎಸ್ಆರ್ ಬೆಂಗಳೂರು-ಹುಬ್ಬಳ್ಳಿ ಜಂಕ್ಷನ್ ಎಸಿ ಚೇರ್ ಕಾರ್ 1155 ರೂ.ಗಳು., ಎಕ್ಸಿಕ್ಯುಟಿವ್ ಕ್ಲಾಸ್ 2,200 ರೂ.ಗಳು., ಕೆಎಸ್ಆರ್ ಬೆಂಗಳೂರು-ಧಾರವಾಡ ಎಸಿ ಚೇರ್ ಕಾರ್ 1185 ರೂ.ಗಳು, ಎಕ್ಸಿಕ್ಯುಟಿವ್ ಕ್ಲಾಸ್ 2265 ರೂ. ಗಳು.
ಧಾರವಾಡ-ಕೆಎಸ್ಆರ್ ಬೆಂಗಳೂರು ಎಸಿ ಚೇರ್ ಕಾರ್ 1350 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2460 ರೂ.ಗಳು., ಧಾರವಾಡ-ಯಶವಂತಪುರ ಎಸಿ ಚೇರ್ ಕಾರ್ 1350 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2460 ರೂ.ಗಳು.
ಧಾರವಾಡ-ದಾವಣಗೆರೆ ಎಸಿ ಚೇರ್ ಕಾರ್ 765 ರೂ.ಗಳು, ಎಕ್ಸಿಕ್ಯುಟಿವ್ ಕ್ಲಾಸ್ 1305 ರೂ.ಗಳು. ಧಾರವಾಡ-ಹುಬ್ಬಳ್ಳಿ ಜಂಕ್ಷನ್ ಎಸಿ ಚೇರ್ ಕಾರ್ 365 ರೂ.ಗಳು, ಎಕ್ಸಿಕ್ಯುಟಿವ್ ಕ್ಲಾಸ್ 690 ರೂ.ಗಳು.












Click it and Unblock the Notifications