ಭಾರತ್ ಜೊಡೋ ಅಲ್ಲ, ಅದು ಕಾಂಗ್ರೆಸ್ ತೊಡೋ ಯಾತ್ರೆ: ಹುಬ್ಬಳ್ಳಿಯಲ್ಲಿ ಜೋಶಿ ವ್ಯಂಗ್ಯ
ಹುಬ್ಬಳ್ಳಿ, ಅಕ್ಟೋಬರ್, 23: ರಾಹುಲ್ ಗಾಂಧಿಯವರು ಯಾರೋ ಬರೆದುಕೊಟ್ಟಿದ್ದನ್ನು ಓದುತ್ತಾರೆ. ಓದುವುದನ್ನು ಕೂಡ ಅವರು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಅದೇ ಅವರ ಸಮಸ್ಯೆ ಎಂದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ವ್ಯಂಗ್ಯವಾಡಿದರು. ಇನ್ನು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ್ ಜೊಡೋ ಇದೀಗ ಕಾಂಗ್ರೆಸ್ ತೊಡೋ ಯಾತ್ರೆ ಆಗುತ್ತಿದೆ ಎಂದು ಕುಹಕವಾಡಿದ್ದಾರೆ.
"ರಾಹುಲ್ ಗಾಂಧಿ ಬರೆದು ಕೊಟ್ಟಿದ್ದನ್ನಷ್ಟೇ ಓದುತ್ತಾರೆ. ಪ್ರತ್ಯೇಕವಾಗಿ ಪ್ರಶ್ನೆ ಮಾಡಿದರೆ ಅವರಿಗೆ ಉತ್ತರ ಕೊಡುವುದಕ್ಕೆ ಬರುವುದಿಲ್ಲ. ಬಾಯಿಪಾಠ ಮಾಡಿಸಿದ್ದು ಬಿಟ್ಟರೆ, ಅವರಿಗೆ ಬೇರೆ ಏನು ಹೇಳುವುದಕ್ಕೆ ಬರುವುದಿಲ್ಲ. ಅವರಿಗೆ ಏನು ಪ್ರತಿಕ್ರಿಯೆ ಮಾಡುವುದು. ಭಾರತ್ ಜೊಡೋ ಇದೀಗ ಕಾಂಗ್ರೆಸ್ ತೊಡೋ ಯಾತ್ರೆ ಆಗುತ್ತಿದೆ. ಹಲವರು ಕಾಂಗ್ರೆಸ್ ಚೋಡೋ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ನೀವು ಭಾರತ್ ಜೋಡೋ ಮಾಡಿ. ಚೀನಾಗೆ ಭೂಮಿ ಕೊಟ್ಟಿದ್ದರ ಬಗ್ಗೆ ಜೊಡೋ ಮಾಡಿ. ನೀವು ತೋಡೋ ಮಾಡಿದವರ ಪಾರ್ಟಿಯವರಾಗಿದ್ದೀರಿ," ಎಂದು ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದರು.
ಭಾರತ ಮೋದಿ ನೇತೃತ್ವದಲ್ಲಿ ಜೊಡೋ ಆಗಿದೆ
ಭಾರತ ಮೋದಿ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಜೊಡೋ ಆಗಿದೆ. ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಇದ್ದರೆ ಭಾರತ ಗೆಲ್ಲುತ್ತದೆ. ಇಂಡಿಯಾ ಗೆಲ್ಲಬೇಕು ಗೆದ್ದೇ ಗೆಲ್ಲುತ್ತದೆ. ಅದರ ಬಗ್ಗೆ ಅನುಮಾನ ಬೇಡ ಎಂದ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ದೀಪಾವಳಿ ನಂತರ ದೆಹಲಿಗೆ ಬರುತ್ತೇನೆ ಎಂದಿದಾರೆ. ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ ಆಗುವ ಬಗ್ಗೆ ಜೋಶಿ ಸುಳಿವು ಕೊಟ್ಟರು.

ಮಹಾದಾಯಿ ಬಗ್ಗೆ ಜೋಶಿ ಹೇಳಿದ್ದೇನು?
ಗೋವಿಂದ ಕಾರಜೋಳ ಮುತುವರ್ಜಿಯಿಂದ ಒಳ್ಳೆಯ ಕೆಲಸ ಆಗುತ್ತಿದೆ. ಟೆಕ್ನಾಲಜಿ ಉಪಯೋಗಿಸಿ ಉತ್ತಮವಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ಅರಣ್ಯವನ್ನು ಉಳಸಬೇಕಿದೆ. ಒಂದು ವರ್ಷದೊಳಗೆ ನೀರು ಬರುತ್ತಿದ್ದು, ಇದು ರೈತರಿಗೆ ಉಪಯೋಗವಾಗಲಿದೆ. ಕೆಲವರು ನಿರುದ್ಯೋಗಿಗಳು ಮೊಸರಲ್ಲಿ ಕಲ್ಲು ಹುಡಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಅವರ ವಿರುದ್ದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸವದತ್ತಿ ಶಾಸಕ ಹಾಗೂ ವಿಧಾನಸಭಾ ಉಪಾಸಭಾಧ್ಯಕ್ಷ ಆನಂದ್ ಮಾಮನಿ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ ವ್ಯಕ್ತಪಡಿಸಿದರು.

ಆನಂದ್ ಮಾಮನಿ ಅವರು ವೈಯಕ್ತಿಕವಾಗಿ ನನಗೆ ಬಹಳ ಆತ್ಮೀಯರಾಗಿದ್ದರು. ಮೂರು ಬಾರಿ ಶಾಸಕರಾಗಿದ್ದ ಮಾಮನಿ ಜನಾನುರಾಗಿ ಆಗಿದ್ದರು. ಆನಂದ್ ಮಾಮನಿಯನ್ನ ನಾನು ಹದಿನೈದು ದಿನಗಳ ಹಿಂದೆ ಭೇಟಿ ಮಾಡಿದ್ದೆ. ಮಾಮನಿ ಅನಾರೋಗ್ಯ ಹೋರಾಟದಲ್ಲಿ ಗೆದ್ದು ಬರುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಅವರಲ್ಲಿ ಬಹಳ ಧೃಡವಾದ ನಂಬಿಕೆ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಮಾಮನಿ ಮೃತಪಟ್ಟಿದ್ದಾರೆ ಎಂದು ಜೋಶಿ ದುಃಖ ವ್ಯಕ್ತಪಡಿಸಿದರು. ದೀಪಾವಳಿ ಹಬ್ಬದ ಸಂತೋಷ ಸಮಯದಲ್ಲಿ ಅವರು ನಿಧನವಾಗಿದ್ದು ಬಹಳ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ. ಹಾಗೂ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.












Click it and Unblock the Notifications