ಸಿಬಿಐಯವರ ಮೇಲೆ ಬಿಜೆಪಿಗೆ ಅಷ್ಟೊಂದು ಪ್ರೀತಿ ಯಾಕೆ..?-ಶಾಸಕ ಎನ್.ಹೆಚ್ ಕೋನರೆಡ್ಡಿ
ಹುಬ್ಬಳ್ಳಿ, ಆಗಸ್ಟ್ 21: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ತೀವ್ರ ಒತ್ತಾಯಿಸುತ್ತಿದ್ದಾರೆ. ರಾಜ್ಯಪಾಲರ ಅನುಮತಿ ವಿರುದ್ಧ ಸಿದ್ದರಾಮಯ್ಯ ಕೂಡ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಇತರ ಕೆಲವು ಸಂಘಟನೆಗಳು ಸಿದ್ದರಾಮಯ್ಯ ಪರ ನಿಂತಿದ್ದು, ರಾಜ್ಯದ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಬಗ್ಗೆ ನವಲಗುಂದ ಶಾಸಕ ಎನ್.ಹೆಚ್ ಕೋನರೆಡ್ಡಿ ಮಾತನಾಡಿದ್ದು, ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಡಾ ಹಗರಣ ನಡೆದಿದೆ. ಈ ಹಗರಣ ಮಾಡಿ ಯಾವ ಪುರುಷಾರ್ಥಕ್ಕೆ ಬಿಜೆಪಿ ಈಗ ಪಾದಯಾತ್ರೆ ಮಾಡಿದೆ..? ಸಿದ್ದರಾಮಯ್ಯನನ್ನು ಮುಡಾದಲ್ಲಿ ಸಿಗಿಸುವ ಪ್ಲ್ಯಾನ್ ಬಿಜೆಪಿ ಮಾಡಿದೆ. ತಮ್ಮ ಹುಳುಕು ಎಲ್ಲಿ ಹೊರಗೆ ಬರುತ್ತದೆ ಅಂತಾ ಬಿಜೆಪಿ ಸದನವನ್ನು ಸರಿಯಾಗಿ ನಡೆಸಲು ಬಿಡಲಿಲ್ಲ ಎಂದು ಆರೋಪಿಸಿದರು.
ರಾಜ್ಯದ ಜನ ಸಿದ್ದರಾಮಯ್ಯವರ ಪರ ಇದ್ದಾರೆ. ಪಂಚ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಮ್ಮ ಸಿಎಂ ನಡೆದಿದ್ದಾರೆ. ಏಳನೇ ಗ್ಯಾರಂಟಿಯಾಗಿ ಏಳನೇ ವೇತನ ಆಯೋಗ ಜಾರಿ ಮಾಡಿದ್ದಾರೆ. ಸಿದ್ದರಾಮಯ್ಯವರ ಹೆಸರು ಕೆಡಿಸಲು ಹೋಗಿ ಬಿಜೆಪಿ ತನ್ನ ಚಪಡಿ ಕಲ್ಲನ್ನು ತನ್ನ ಮೇಲೆ ಹಾಕಿಕೊಂಡಿದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಆಗಸ್ಟ್ 29 ರವರೆಗೆ ನ್ಯಾಯಾಧೀಶರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಪ್ರಕರಣದಲ್ಲಿ ಯಾವುದೇ ಆದೇಶ ಹೊರಡಿಸದಂತೆ ಹೇಳಿದ್ದಾರೆ. ನಮಗೆ ಇನ್ನೂ ಹತ್ತು ದಿನ ರಿಲೀಫ್ ಕೊಟ್ಟಿದ್ದಾರೆ. ಸತ್ಯಕ್ಕೆ ಯಾವಾಗಲೂ ಜಯ ಇದೆ, ನಮಗೆ ಜಯ ಸಿಗುವ ಭರವಸೆ ಇದೆ ಎಂದರು.

ಮುಡಾ ಹಗರಣ ಸಿಬಿಐಗೆ ನೀಡುವಂತೆ ಬಿಜೆಪಿಗರ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ವಾ..? ಸಿಬಿಐಯವರ ಮೇಲೆ ಬಿಜೆಪಿಗೆ ಅಷ್ಟೊಂದು ಪ್ರೀತಿ ಯಾಕೆ..? ಇವರ ಅಧಿಕಾರದಲ್ಲಿದ್ದಾಗ ಸಿಬಿಐ ಮೇಲೆ ನಂಬಿಕೆ ಇರಲಿಲ್ವಾ..? ಈಗ ಅವರ ಮೇಲೆ ನಂಬಿಕೆ ಜಾಸ್ತಿ ಆಗಿದೆಯೇ..?. ಸಿದ್ದರಾಮಯ್ಯ ಅವರಿಗೆ ಸರಿಸಾಟಿ ಯಾರೂ ಇಲ್ಲ. ಜನಪರ ಆಡಳಿತವನ್ನು ಸಿದ್ದರಾಮಯ್ಯನವರು ನೀಡುತ್ತಿದ್ದಾರೆ ಎಂದರು.












Click it and Unblock the Notifications