ಕಾಂಗ್ರೆಸ್ ಧ್ವಜ ಬಳಕೆಗೆ ಅವಕಾಶ ಕೊಡದವರ ಮುಂದೆ 'ಕೈ' ನಾಯಕರು ಸೈಲೆಂಟ್: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ , ಮೇ 05: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮುಸ್ಲಿಮ್ ತುಷ್ಟೀಕರಣವು ಪರಾಕಾಷ್ಠೆ ತಲುಪಿದೆ. ವಯನಾಡು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಅದರ ಧ್ವಜ ಬಳಕೆಗೆ ಅವಕಾಶ ಕೊಟ್ಟಿಲ್ಲ. ಮುಸ್ಲಿಮ್ ಲೀಗ್ ಎದುರು ಕಾಂಗ್ರೆಸ್ ನತಮಸ್ತಕವಾಗಿದೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಂಪೂರ್ಣ ಮುಸ್ಲಿಮರಿಗೆ ಕೊಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತದೆ. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ಕೊಡಬಾರದು ಎಂದು ಅವರು ಒತ್ತಾಯಿಸಿದರು.

ಧಜ್ವದಲ್ಲಿ ಕೇಸರಿ ಬಣ್ಣ: ಬಳಕೆಗೆ ಅವಕಾಶ ನೀಡಿಲ್ಲ
ವಯನಾಡು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಅದರ ಧ್ವಜ ಬಳಕೆಗೆ ಅವಕಾಶ ಕೊಟ್ಟಿಲ್ಲ. ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಬಣ್ಣವಿದೆ. ಅದನ್ನು ಬಳಸಿದರೆ ನಾವು ನಿಮ್ಮ ಜೊತೆ ಬರುವುದಿಲ್ಲ ಎಂದು ಮುಸ್ಲಿಮ್ ಲೀಗ್ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್‌ನವರು ಮುಸ್ಲಿಂರ ಮುಂದೆ ಏನು ಮಾತನಾಡದ ಸ್ಥಿತಿಗೆ ತಲುಪಿಸಿದ್ದಾರೆ ಎಂದು ಅವರು ಹರಿಹಾಯ್ದರು.
ಇನ್ನೂ ಮೀಸಲಾತಿ ವಿಚಾರ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೋಟೀಸ್ ನೀಡಿದರೂ ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಕಾಲೆಳೆದರು.
ಕಾಂಗ್ರೆಸ್ ತುಷ್ಟೀಕರಣದ ಉದಾಹರಣೆ ಇವು
ಹನುಮಾನ ಚಾಲೀಸಾ ಹೇಳಿದವರನ್ನು ಜೈಲಿಗೆ ಹಾಕುವುದು, ಬೆಂಗಳೂರು ಹುಬ್ಬಳ್ಳಿ ಗಲಭೆಗಳ ಆಪಾದಿತರನ್ನು ಬಿಡುಗಡೆ ಮಾಡುವುದು, ನೇಹಾ ಹಿರೇಮಠ ಪ್ರಕರಣ ಕುರಿತು ಉಡಾಫೆ ಮಾತು ಹೇಳುವುದು ಇವೆಲ್ಲ ಕಾಂಗ್ರೆಸ್‌ನ ತುಷ್ಟೀಕರಣದ ಉದಾಹರಣೆಗಳು ಎಂದು ಅವರು ವಿವರಿಸಿದರು.
ಬರಗಾಲ ಸಮಸ್ಯೆ: ರಾಜ್ಯದ ಜನರ ಪರ ಧ್ವನಿಯಾದ ಜೋಶಿ
ಕರ್ನಾಟಕದಲ್ಲಿ ಈ ವರ್ಷ ನಿರೀಕ್ಷಿತ ಮಳೆ ಬಂದಿಲ್ಲ. ಮತ್ತೊಂದು ತಾಪಮಾನ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಜನ ಮತ್ತು ಜಾನುವಾರು ಇಬ್ಬರೂ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಇಬ್ಬರಿಗೂ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು.
ರಾಜ್ಯ ಸರ್ಕಾರ ಕೂಡಲೇ ಮೇವು ಬ್ಯಾಂಕ್ ತೆರೆಯಬೇಕು. ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆಗೆ ಟಾಸ್‌ಫೋರ್ಸ್ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಈ ಮೂಲಕ ರೈತರು, ಸಂಕಷ್ಟಕ್ಕೆ ಈಡಾದ ರಾಜ್ಯದ ಜನರ ಪರ ಧ್ವನಿ ಎತ್ತಿದರು.
ರೈತರಿಗೆ ಸಹಾಯದ ಬಿಡುಗಡೆ ಜೋಶಿ ಆಗ್ರಹ
ಸರ್ಕಾರವು ಹೈನುಗಾರಿಕೆ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಒಂದು ಕಡೆ ರೈತರಿಗೆ ಪ್ರೋತ್ಸಾಹ ಧನವನ್ನೂ ಕೊಡುತ್ತಿಲ್ಲ. ಇತ್ತ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. 10 ರೂ. ಬಾಂಡ್ ಬದಲಿಗೆ ಈಗ ನೂರು ರೂ ಬಾಂಡ್ ಖರೀದಿಸಬೇಕಾಗಿದೆ. ನೋಂದಣಿ ಶುಲ್ಕವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ.
ಮೊದಲು 4.75 ರೂ. ಇದ್ದ ವಿದ್ಯುತ್ ದರವನ್ನು ಈಗ 7.25 ರೂ.ಗೆ ಏರಿಕೆ ಮಾಡಲಾಗಿದೆ. ಇದೇ ಕಾಂಗ್ರೆಸ್‌ನ ತಥಾಕಥಿತ ಗ್ಯಾರಂಟಿ ಎಂದು ಕಾಂಗ್ರೆಸ್ ಆಡಳಿತ ಕುರಿತು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನ ಗ್ಯಾರಂಟಿ ಜನರಿಗೆ ಮರಣ ಶಾಸನ
ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಹಣವು ಫಲಾನುಭವಿಗಳಿಗೆ ವಿತರಣೆ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಗ್ಯಾರಂಟಿ ಶಬ್ದಕ್ಕೆ ಅರ್ಥವಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಜನರಿಗೆ ಮರಣ ಶಾಸನವಾಗಿದೆ. ನಿತ್ಯವೂ ಕೇಂದ್ರ ಸರ್ಕಾರವನ್ನು ಟೀಕಿಸುವುದು, ಗಾಂಧಿ ಪ್ರತಿಮೆ ಬಳಿ ಧರಣಿ ಹೂಡುವುದಷ್ಟೇ ಕಾಂಗ್ರೆಸ್‌ನವರ ಕೆಲಸವಾಗಿದೆ. ಆದರೆ ಜನರಿಗೆ ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದರು.
ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಆದರೆ ವಿರೋಧ ಪಕ್ಷಗಳಲ್ಲಿ ಒಕ್ಕಟ್ಟು ಇಲ್ಲ. ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ಸ್ಪರ್ಧಿಸಿದ್ದೇ ೨೩೮ ಕ್ಷೇತ್ರಗಳಲ್ಲಿ. ಹಾಗಾಗಿ ಅವರಿಗೆ ಬಹುಮತವೂ ಇಲ್ಲ. ಪ್ರಧಾನಿ ಪಟ್ಟವೂ ಕನಸು ಎಂದು ಭವಿಷ್ಯ ನುಡಿದರು.
10 ವರ್ಷಗಳಲ್ಲಿ ಅಭಿವೃದ್ಧಿ ಕಂಡ ಧಾರವಾಡ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳಾಗಿವೆ. ರೇಲ್ವೆ, ಐಐಟಿ, ಆಸ್ಪತ್ರೆ, ಹೆದ್ದಾರಿಗಳು ಜನರ ಮನಸ್ಸಿನಲ್ಲಿವೆ. ವಿಮಾನ ನಿಲ್ದಾಣವನ್ನು ಇನ್ನೂ ಅಭಿವೃದ್ಧಿಗೊಳಿಸಬೇಕಾಗಿದೆ. ಸರಕು ಸಾಗಣೆ ಹೆಚ್ಚಾಗಲು ಪ್ರಯತ್ನಿಸಲಾಗುವುದು.
ಕಳಸಾ ಬಂಡೂರಿ ಯೋಜನೆ ಕುರಿತು ಕಾಂಗ್ರೆಸ್‌ನವರಿಗೆ ಆಸಕ್ತಿ ಇಲ್ಲ. ಅವರು ಒಂದು ನಯಾ ಪೈಸಾ ಕೆಲಸ ಮಾಡಿಲ್ಲ ಎಂದ ಅವರು ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂಆರ್ ಪಾಟೀಲ್, ಮಹೇಶ ಟೆಂಗಿನಕಾಯಿ, ಲೋಕಸಭಾ ಕ್ಷೇತ್ರದ ಸಂಚಾಲಕ ಎಂ.ನಾಗರಾಜ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಪ್ರಶಾಂತ ಕೆಡಂಜೆ, ಗುರು ಪಾಟೀಲ, ಸಿದ್ಧನಗೌಡ್ರ, ನಾಗನಗೌಡ್ರ ಮತ್ತಿತರರು ಉಪಸ್ಥಿತರು ಇದ್ದರು.












Click it and Unblock the Notifications