ಬೆಳಗಾವಿ: ಮದುವೆ ಮನೆಯಲ್ಲಿ ಊಟ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥ, ದೃಷ್ಟಿ ಕಳೆದುಕೊಂಡ ಓರ್ವ ವ್ಯಕ್ತಿ
ಬೆಳಗಾವಿ, ಆಗಸ್ಟ್, 30: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ಮದುವೆ ಮನೆಯಲ್ಲಿ ಊಟ ಮಾಡಿ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ವ್ಯಕ್ತಿ ದೃಷ್ಟಿ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಬಾ ಸಾಹೇಬ್ ಬೇಗ್ (37) ದೃಷ್ಟಿ ಕಳೆದುಕೊಂಡವರು. ಸೋಮವಾರ ಊಟ ಮಾಡಿ ಮನೆಗೆ ವಾಪಾಸ್ ಆದ ಬಳಿಕ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಂತರ ಏಕಾಏಕಿ ದೃಷ್ಟಿಯೇ ಕಾಣದೆ ಕಂಗಾಲಾದ ಬಾಬಾಸಾಹೇಬ ಅವರನ್ನು ಆರಂಭದಲ್ಲಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬುಧವಾರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಬಾಬಾಸಾಹೇಬ್ ಅವರನ್ನು ಶಿಪ್ಟ್ ಮಾಡಿ ಚಿಕಿತ್ಸೆ ಮುಂದುವರೆಸಲಾಗಿದೆ.

ಇನ್ನು ಈ ಕುರಿತು ಮಾತನಾಡಿದ ಬೆಳಗಾವಿಯ ಬಿಮ್ಸ್ ವೈದ್ಯಕೀಯ ಅಧೀಕ್ಷಕ ಎ.ಬಿ.ಪಾಟೀಲ್, ಇಂದು ಮುಂಜಾನೆ ಬಾಬಾಸಾಹೇಬ್ ಎಂಬ ವ್ಯಕ್ತಿ ದಾಖಲಾಗಿದ್ದರು. ಫುಡ್ ಪಾಯಿಸನ್ ಆಗಿ ದೃಷ್ಟಿ ಹೋಗಿದೆ ಎಂದು ಹೇಳಿದ್ದಾರೆ. ಕಣ್ಣು ಫಂಡೋಸ್ಕೋಪಿಕ್ ಮಾಡಿ ನೋಡಿದಾಗ ನಾರ್ಮಲ್ ಇದೆ. ಯಾವ ಕಾರಣಕ್ಕೆ ದೃಷ್ಟಿ ಹೋಗಿದೆ ಎನ್ನುವುದು ನಿಖರವಾಗಿ ತಿಳಿದಿಲ್ಲ. ನೇತ್ರ ತಜ್ಞರು ಬಾಬಾಸಾಹೇಬ್ ಅವರನ್ನು ಪರೀಕ್ಷಿಸಿದ್ದಾರೆ. ಎಂಆರ್‌ಐ ನಡೆಸುವಂತೆಯೂ ಸಲಹೆ ಮಾಡಿದ್ದಾರೆ. ಎಂಆರ್‌ಐ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ ಎಂದರು.
ಪ್ರಕರಣ ಹಿನ್ನಲೆ
ಆಗಸ್ಟ್ 28ರಂದು ಪಟೇಲ್ ಕುಟುಂಬದ ಮದುವೆ ಸಮಾರಂಭದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಳಿಕ ಊಟ ಮಾಡಿ ಮನೆಗೆ ವಾಪಾಸ್ ಆಗುತ್ತಿದ್ದಂತೆ ಕೆಲ ಜನರಿಗೆ ವಾಂತಿ-ಭೇದಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು, ಸರ್ಕಾರಿ ಶಾಲೆಯಲ್ಲಿಯೇ ತಪಾಸಣೆ ನಡೆಸುತ್ತಿದ್ದರು.
ಅಷ್ಟೇ ಅಲ್ಲದೇ ಗ್ರಾಮದ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆಗೆ ನಿರ್ಧರಿಸಿದ್ದರು. ಹಾಗೂ ತೀವ್ರ ಅಸ್ವಸ್ಥಗೊಂಡವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ ಮಿರಜ್ ಸಂಬಂಧಿಕರಾಗಿದ್ದಾರೆ ಎನ್ನಲಾಗಿದೆ.
ಮದುವೆ ಸಮಾರಂಭಕ್ಕೆ ಮಹಾರಾಷ್ಟ್ರದ ಮಿರಜ್‌ನಿಂದ ಆಗಮಿಸಿದ್ದರು. ಅವರಿಗೂ ಕೂಡ ವಾಂತಿ ಬೇಧಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫಾತಿಮಾ ಎಂಬ ಮಹಿಳೆ ಮಾಧ್ಯಮದ ಮುಂದೆ ತಮ್ಮ ನೋವು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ. ಹಿರೇಕೋಡಿಯಲ್ಲಿ ನಿನ್ನೆ ನಡೆದಿದ್ದ ಮದುವೆ ಸಮಾರಂಭದಲ್ಲಿ ಊಟ ಸೇವಿಸಿ ಮನೆಗೆ ವಾಪಸ್ ಆದ ಬಳಿಕ ವಾಂತಿ ಬೇಧಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದರು.












Click it and Unblock the Notifications