ಕಲಘಟಗಿಯಲ್ಲಿ ಬಿಜೆಪಿ ಟಿಕೆಟ್ ಗೊಂದಲ: ಕ್ಷೇತ್ರಕ್ಕೆ ಆಕಾಂಕ್ಷಿಗಳ ಕೊಡುಗೆ ಮಾತ್ರ ಶೂನ್ಯ
ಹುಬ್ಬಳ್ಳಿ, ಮಾರ್ಚ್ 28 : ಉತ್ತರ ಕರ್ನಾಟಕ ಭಾಗದಲ್ಲಿಯೇ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿ ಹೊಂದಿದೆ. ಸದ್ಯ ಬಿಜೆಪಿಯ ಸಿ.ಎಂ.ನಿಂಬಣ್ಣವರ ಶಾಸಕರಾಗಿದ್ದಾರೆ.
ಈ ಮೊದಲು ಶಾಸಕರಾಗಿದ್ದ, ಮಾಜಿ ಸಚಿವ ಸಂತೋಷ ಲಾಡ್ ಅವರು ಕಳೆದ ಅವಧಿಯಲ್ಲಿ ವೈಯಕ್ತಿಕ ಕಾರಣಗಳಿಂದ ಕ್ಷೇತ್ರವನ್ನು ನಿರ್ಲಕ್ಷಿಸಿದ ಪರಿಣಾಮ, ಸ್ಥಳೀಯರು, ನಿವೃತ್ತ ಶಿಕ್ಷಕರೂ ಆಗಿದ್ದ ಸಿ.ಎಂ. ನಿಂಬಣ್ಣವರ ಅನುಕಂಪದ ಆಧಾರದ ಮೇಲೆ ಗೆದ್ದು ಬಂದರು. ಆದರೆ ಈ ಬಾರಿ ಕ್ಷೇತ್ರದ ಪರಿಸ್ಥಿತಿ ಕಳೆದ ಬಾರಿಯಂತಿಲ್ಲ. ಯಾವುದೇ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಗೆಲವು ಮಾತ್ರ ಮುಳ್ಳಿನ ಹಾದಿಯಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿದೆ. ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಏರ್ಪಟ್ಟಿದೆ. ಹೆಸರಿಗೆ ಮಾತ್ರ 15 ಆಕಾಂಕ್ಷಿಗಳಿದ್ದು, ಕ್ಷೇತ್ರದಲ್ಲಿ ಇವರ ಕೊಡುಗೆ ಮಾತ್ರ ಸೊನ್ನೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಗೊಂದಲ ಸೃಷ್ಟಿಯಾಗಿದೆ. ಹಾಲಿ ಶಾಸಕರಾದ ಸಿ.ಎಂ ನಿಂಬಣ್ಣವರ ಈ ಕ್ಷೇತ್ರಕ್ಕೆ ಮತ್ತೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಈ ಬಾರಿ ಪಕ್ಷ ಟಿಕೆಟ್ ನಿಡುವ ಸಾಧ್ಯತೆ ಕಡಿಮೆ ಇದೆ ಎನ್ನುವುದನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ನಿರ್ಧರಿಸಿ ಬಿಟ್ಟಿದ್ದಾರೆ.
ಕಾರಣ ಈಗಾಗಲೇ 15 ರಿಂದ 20 ಜನರು ಕಲಘಟಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದು, ಕ್ಷೇತ್ರದಲ್ಲಿ ಈಗಾಗಲೇ ಅಂಗಡಿಗಳಿಗೆ ಲೈಟ್ ಕಂಬಗಳಿಗೆ ಜಾಗವಿಲ್ಲದಷ್ಟು ತಮ್ಮ ಭಿತ್ತಿ ಪತ್ರ ಅಂಟಿಸುವ ಮೂಲಕ ಪ್ರಚಾರ ನಡೆಸಿದ್ದಾರೆ. ಒಂದು ವಿಪರ್ಯಾಸವೆಂದರೆ ಈಗಿನ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಇದುವರೆಗೂ ಜನರ ಸಮಸ್ಯೆಗೆ ಸ್ಪಂದಿಸಿಲ್ಲ ಎನ್ನಲಾಗಿದೆ. ಈಗ ಏಕಾಏಕಿ ಚುನಾವಣೆ ಬಂದ ನಂತರ ಟಿಕೆಟ್ ಆಕಾಂಕ್ಷಿಗಳ ಓಡಾಟ ಕ್ಷೇತ್ರದ ಜನರಲ್ಲಿ ಪ್ರಶ್ನೆಯಾಗಿದೆ.

ಇನ್ನು, ಬಿಜೆಪಿಯಿಂದ ಮತ್ತೊಂದು ಬಾರಿ ಸ್ಪರ್ಧಿಸಲು ನಿಂಬಣ್ಣ ಉತ್ಸುಕರಾಗಿದ್ದಾರೆ. ತಮಗೆ ಟಿಕೆಟ್ ನೀಡದೇ ಹೋದರೆ ಪುತ್ರ ಶಶಿಧರ್‌ಗೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ.ಎಸ್. ಪಾಟೀಲ, ಸದಾನಂದ ಚಿಂತಾಮಣಿ, ಪಿ.ಪಿ. ಹೊನ್ನಳ್ಳಿ, ಕಲ್ಮೇಶ ಹಾವೇರಿ ಪೇಟ, ಶಂಕರ್ ಬಸವರೆಡ್ಡಿ ಹಾಗೂ ಮಾಜಿ ಮೇಯರ್ ಶಿವು ಹಿರೇಮಠ ಸಹ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ಥಳೀಯ ಶಾಸಕರು ಬೇಕು ಎಂದು ಪ್ರತಿಭಟನೆ ಮಾಡಿ ಟಿಕೆಟ್ ತರುವಲ್ಲಿ ಯಶಸ್ವಿಯಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈಗ ಟಿಕೆಟ್ ಆಕಾಂಕ್ಷಿಗಳಾಗಿ ನೋಡಿದರೆ ತಮ್ಮ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಿಲ್ಲವೇ ಎನ್ನುವ ಅನುಮಾನ ಎಲ್ಲರಲ್ಲಿ ಮೂಡಿದೆ.
ಇನ್ನು ಜೆಡಿಎಸ್‌ನಿಂದ ಈರಣ್ಣ ಶೀಗಿಗಟ್ಟಿ ಹಾಗೂ ಆನಂದ ಹಬೀಬ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹಾಗೂ ಮಾಜಿ ಸಚಿವ ಸಂತೋಷ ಲಾಡ್ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದೆ. ಹೀಗಾಗಿ ಇಬ್ಬರು ನಾಯಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.












Click it and Unblock the Notifications