"ಮಠಾಧೀಶರ ಹಾಗೆ ಸಚಿವರು ಊರು ಸುತ್ತುವುದನ್ನು ಬಿಡಲಿ"
ಹುಬ್ಬಳ್ಳಿ, ಅಕ್ಟೋಬರ್ 03: "ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿ, ಇಲ್ಲಿನ ಸಚಿವರು ಮಠಾಧೀಶರ ಹಾಗೆ ಧರ್ಮದ ಹೆಸರಲ್ಲಿ ಊರೂರು ತಿರುಗುತ್ತಿದ್ದಾರೆ. ಅದನ್ನು ಬಿಟ್ಟು ಮೊದಲು ಜಿಲ್ಲೆಯ ಅಭಿವೃದ್ಧಿಯ ಕಡೆ ಗಮನ ಕೊಡಲಿ" ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಯ ಕುಲಕರ್ಣಿಯವರಿಗೆ ಚುನಾವಣೆ ಬಂದಾಗ ಮಾತ್ರ ಜಾತಿ, ಧರ್ಮ ನೆನಪಾಗುತ್ತಿದೆ. ಪ್ರತ್ಯೇಕ ಧರ್ಮದ ಸಲುವಾಗಿ ಸಭೆ ಮಾಡುತ್ತಿದ್ದಾರೆ. ಅವಳಿ ನಗರಗಳ ಅಭಿವೃದ್ಧಿಯ ಬಗ್ಗೆ ಸಭೆ ಮಾಡುತ್ತಿಲ್ಲ. ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅವಳಿ ನಗರಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಜನಪ್ರತಿನಿಧಿಗಳಿಗೆ ಜನರು ಛಿ ಥೂ ಎನ್ನುತ್ತಿದ್ದಾರೆ. ಹೀಗಿರುವಾಗ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯನ್ನು ಯಾರ ಗಮನಕ್ಕೂ ತರದೆ ಮುಂದೂಡುತ್ತಿದ್ದಾರೆ ಎಂದರು.

ವೀರಶೈವ ಮತ್ತು ಲಿಂಗಾಯತ ಧರ್ಮಗಳೆರಡೂ ಒಂದೇ. ಸಿದ್ಧಗಂಗಾ ಶ್ರೀಗಳ ನಿಲುವಿಗೆ ನಾವೆಲ್ಲ ಬದ್ಧ. ಸಿದ್ದಗಂಗಾ ಶ್ರೀಗಳು ನಮಗೆ ಬಸವಣ್ಣ ಇದ್ದ ಹಾಗೆ. ಅವರ ಮಾತೇ ಅಂತಿಮ ಎಂದು ಸ್ವತಂತ್ರ ಧರ್ಮದ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಮಠಾಧೀಶರು ಧರ್ಮದ ವಿಷಯ ನೋಡಿಕೊಳ್ಳುತ್ತಾರೆ. ರಾಜಕಾರಣಿಗಳು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಎಲ್ಲ ಧರ್ಮದವರು ಮತ ಹಾಕಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ನಾವು ಜನಪ್ರತಿನಿಧಿಗಳಾಗಿಲ್ಲ. ಸಚಿವ ವಿನಯ ಕುಲಕರ್ಣಿಯವರು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ನಿಲ್ಲಿಸಲಿ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿಯ ಕಡೆ ಗಮನ ಕೊಡಲಿ ಎಂದಿದ್ದಾರೆ.












Click it and Unblock the Notifications