ಬ್ಯಾಹಟ್ಟಿ: ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಿದ್ಧಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೇ ಕೂಡಿ ಹಾಕಿದ ಗ್ರಾಮಸ್ಥರು
ಹುಬ್ಬಳ್ಳಿ, ಜೂನ್, 05: ಮೂಲಭೂತ ಸೌಕರ್ಯಗಳನ್ನು ನೀಡದ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಅಲ್ಲಿನ ಸಿಬ್ಬಂದಿಗಳನ್ನು ಕೂಡಿಹಾಕಿದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಗ್ರಾಮದ ಜಗದೀಶ್ವರನಗರದಲ್ಲಿ ಕಳೆದ ಆರು ವರ್ಷಗಳಿಂದ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕವಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ಸೌಲಭ್ಯಗಳನ್ನು ಒದಗಿಸುತ್ತಾರೆ. ಬಳಿಕ ಅಧಿಕಾರಿಗಳು ಸೌಲಭ್ಯಗನ್ನು ವಾಪಾಸ್ ಪಡೆದುಕೊಂಡಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರ ಆರೋಪ ಆಗಿದೆ.

ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಈ ಹಿಂದೆ ಸಾಕಷ್ಟು ಬಾರಿ ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೇ ಚುನಾವಣಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮಾತ್ರ ಸೌಕರ್ಯಗಳನ್ನು ಒದಗಿಸಲಾಗಿತ್ತು. ಚುನಾವಣೆ ಮುಗಿದ ಬಳಿಕ ಇದೀಗ ಸೌಕರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮರಳಿ ಸೌಕರ್ಯಗಳನ್ನು ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ.
ಗ್ರಾಮಗಳು ಅಂದಮೇಲೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಗ್ರಾಮೀಣ ಪ್ರದೇಶಗಲ್ಲಿ ಚುನಾವಣ ಸಮಯದಲ್ಲಿ ಮಾತ್ರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಾರೆ. ನಂತರ ಕೊಟ್ಟ ಭರಸವಸೆಗಳನ್ನೇನೋ ಈಡೇರಿಸುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ತಾವು ಒದಗಿಸಿದ್ದ ಮೂಲಭೂತ ಸೌಕರ್ಯಗಳನ್ನು ಕಿತ್ತುಕೊಂಡು ಜನರನ್ನು ಗ್ರಾಮ ಪಂಚಾಯತಿ ಕಚೇರಿಗೆ ಅಲೆಯುವಂತೆ ಮಾಡುತ್ತಾರೆ.
ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಕೊರತೆ, ರೋಗಿಗಳ ಪರದಾಟ
ಧಾರವಾಡದ ಜಿಲ್ಲಾಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜಲಮಂಡಳಿಯ ಕಾರ್ಯ ನಿರ್ವಹಣೆಯನ್ನು ಯಾವಾಗ ಎಲ್ ಆ್ಯಂಡ್ ಟಿ ಕಂಪೆನಿಗೆ ವಹಿಸಲಾಯಿತೋ ಆಗಿನಿಂದಲೂ ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡಮಟ್ಟದಲ್ಲಿ ತಲೆದೋರಿದೆ. ಈ ಸಮಸ್ಯೆಗೆ ಇದೀಗ ಜಿಲ್ಲಾ ಆಸ್ಪತ್ರೆ ಕೂಡ ಹೊರತಾಗಿಲ್ಲ.ಕಳೆದ ಹಲವಾರು ದಿನಗಳಿಂದ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಸಮರ್ಪಕ ನೀರಿನ ಸರಬರಾಜು ಆಗದೇ ರೋಗಿಗಳು ಪರದಾಡುವಂತಾಗಿದೆ.
ಚಿಕಿತ್ಸೆ ಹಾಗೂ ಹೆರಿಗೆಗೆ ದಾಖಲಾದ ಹೆಣ್ಣು ಮಕ್ಕಳು ನೀರಿಗಾಗಿ ಈ ಆಸ್ಪತ್ರೆಯಲ್ಲಿ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಇದೀಗ ಖಾಸಗಿಯವರಿಂದ ಹಾಗೂ ಜಲಮಂಡಳಿಯವರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಟ್ಯಾಂಕರ್ ಮೂಲಕ ಸರಬರಾಜು ಮಾಡಿಸಿಕೊಂಡ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ ಎಂಬುದು ರೋಗಿಗಳ ಅಭಿಪ್ರಾಯ ಆಗಿದೆ.
ಧಾರವಾಡದ ಜಿಲ್ಲಾ ಆಸ್ಪತ್ರೆ ಇದೀಗ ಮೇಲ್ದರ್ಜೆಗೆ ಏರಿದೆ. ಹಳೇ ಕಟ್ಟಡದ ಪಕ್ಕವೇ ಮತ್ತೊಂದು ಹೊಸ ಕಟ್ಟಡ ನಿರ್ಮಾಣವಾಗಿದ್ದು, ಅದನ್ನು ಹೆರಿಗೆ ವಾರ್ಡ್ ಅನ್ನಾಗಿ ಮಾಡಲಾಗಿದೆ. ಆದರೆ, ಇಡೀ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮಹಾನಗರ ಪಾಲಿಕೆಯಾಗಲಿ ಅಥವಾ ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿಗಳಾಗಲಿ ಇದರತ್ತ ಗಮನಹರಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.












Click it and Unblock the Notifications