ನೇಹಾ ಕೊಲೆ ಮುಚ್ಚಿ ಹಾಕಲು ಯತ್ನ: ಆ 24 ಗಂಟೆ ಬಹಳ ಮುಖ್ಯವಾಗಿರುತ್ತದೆ: ಆರ್.ಅಶೋಕ್
ಹುಬ್ಬಳ್ಳಿ, ಏಪ್ರಿಲ್ 30: ಹುಬ್ಬಳ್ಳಿಯಲ್ಲಿ ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ನೇಹಾ ಹತ್ಯೆ ನಡೆದಿದೆ. ಪೊಲೀಸರು ಹಂತಕನ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿರುವುದನ್ನು ಬಿಟ್ಟರೆ ಇನ್ಯಾವ ಪ್ರಕ್ರಿಯೆ ನಡೆದಿಲ್ಲ. ಇದು ಕೊಲೆ ಮುಚ್ಚಿ ಹಾಕು ಯತ್ನ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮೃತ ನೇಹಾ ಹಿರಮೇಠ್ ಅವರ ನಿವಾಸಕ್ಕೆ ಭೇಟಿ ನೀಡಿದ ಆರ್.ಅಶೋಕ್ ಅವರು ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ವಿಳಂಬ ಮಾಡುವ ಮೂಲಕ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದರು.

ಘಟನೆ ಬಳಿಕ 24 ಗಂಟೆ ಅತೀ ಮುಖ್ಯವಾದ ಸಮಯ
ಕೊಲೆಯಂತಹ ದುರ್ಘಟನೆಗಳು ನಡೆದಾಗ ಪೊಲೀಸರು ಘಟನಾಸ್ಥಳದಲ್ಲಿ 24 ಗಂಟೆಯೊಳಗಾಗಿ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಬೇಕು. ಆದರೆ ಪೊಲೀಸರು ಅದನ್ನು ಮಾಡಿಲ್ಲ. ಕೇವಲ ಹಂತಕನನ್ನು ಬಂಧಿಸಿ ಕೋರ್ಟ್‌ಗೆ ಒಪ್ಪಿಸಿದ್ದಾರೆ. ಘಟನೆ ನಡೆದ ಬಳಿಕ ಆ 24 ಗಂಟೆ ಅತೀ ಮುಖ್ಯವಾಗಿರುತ್ತದೆ ಎಂದು ಅವರು ವಿವರಿಸಿದರು.
ಕಾಲೇಜ್ ಸೇಫ್ ಅಲ್ಲ ಎಂಬ ಭಾವನೆ
15 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುವ ಕಾಲೇಜ್ ಕೊಲೆ ನಡೆದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಏನ್ ಕ್ರಮ ಕೈಗೊಂಡಿದೆ.
ಕಾಲೇಜ್ ಕ್ಯಾಂಪಸ್ ಕೂಡಾ ಸೇಫ್ ಅಲ್ಲ ಎಂಬ ಭಾವನೆ ಬಂದಿದೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಗೃಹ ಸಚಿವರಿಗೆ ಪೊಲೀಸರಿಗೆ ಕಾಮನಸೆನ್ಸ್ ಇರಬೇಕು ಎಂದರು.

ಹತ್ಯೆ ನಡೆದ 24 ಗಂಟೆ ಬಹಳ ಮುಖ್ಯವಾಗಿರುತ್ತದೆ. ರಕ್ತದ ಕಲೆ, ಮೊಬೈಲ್ ಚೀಟಿ ಎಲ್ಲವೂ ಮುಖ್ಯವಾಗತ್ತೆ.ಇದನ್ನು ಪೊಲೀಸರು ಸಾಕ್ಷ್ಯಾಧಾರವಾಗಿ ಸಂಗ್ರಹಿಟ್ಟುಕೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇಹಾ ಕೊಲೆ ಚರ್ಚೆಯಾಗಿದೆ. ಕೊಲೆ ಒಬ್ಬನೇ ಮಾಡಿಲ್ಲ, ಅವನ ಜೊತೆಗಿದ್ದವರ ತನಿಖೆ ಆಗಬೇಕಿತ್ತು.
ಪ್ರಕರಣ ಸರ್ಕಾರ ಮುಚ್ಚಿಹಾಕಲು ಯತ್ನ
ಕೊಲೆಯಾದ ಕುಟುಂಬಕ್ಕೆ ಯಾರ ಸಂಪರ್ಕ ಇದೆ, ಯಾವ ಸಂಸ್ಥೆ ಅವರ ಸಂಪರ್ಕದಲ್ಲಿತ್ತು ಎನ್ನುವುದು ತನಿಖೆ ಆಗಬೇಕು. ಇದು ಲವ್ ಜಿಹಾದ್ ಎಂದರೆಯೇ ಸರ್ಕಾರಕ್ಕೆ ಕೆಟ್ಟ ಹೆಸರು. ಹೀಗಾಗಿ ಮುಚ್ಚಿ ಹಾಕಲು ಯತ್ನ ಮಾಡುತ್ತಿದೆ ಎಂದು ಹೇಳಿದರು.
ನೇಹಾ ಹತ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೇಲ್ನೋಟಕ್ಕೆ ಲವ್ ಜಿಹಾದ್ ಎಂದು ಕಂಡು ಬರುತ್ತದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ ಎಂಬ ಕಾರಣಕ್ಕೆ ಮರೆಮಾಚಲು ಸುಖಾಸುಮ್ಮನೆ ವಿಳಂಬ ಮಾಡುವ ಕಾರ್ಯ ನಡೆದಿದೆ. ಇದನ್ನು ಅವಲೋಕಿಸಿದರೆ ಪೋಲಿಸರೇ ಆರೋಪಿ ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆಂದು ಅವರು ಆಪಾದಿಸಿದರು.
ಸೂಕ್ತ ತನಿಖೆಯ ಅಗತ್ಯವಿದೆ
ಕೊಲೆಯಾದ ಕೂಡಲೇ ಆರೋಪಿ ವಶಕ್ಕೆ ಪಡೆದು ಪೋಲಿಸರು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದ್ದರೆ ಅವನು ಕೊಲೆಗೆ ಸಂಬಂಧಿಸಿದಂತೆ ಎಲ್ಲ ವಿಷಯ ಬಾಯಿಬಿಡುತ್ತಿದ್ದ. ಅವನನ್ನು ನೋಡಿದರೆ ಸಮಾಜ ವಿರೋಧಿ ಸಂಘಟನೆಯವರೊಂದಿಗೆ ಸಂಪರ್ಕ ಹೊಂದಿರಬಹುದೆಂಬ ಅನುಮಾನ ಇದೆ ಎಂದರು.
ಸದ್ಯ ಪ್ರಕರಣ ಕುರಿತು ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸುವ ಅಗತ್ಯತೆ ಇದೆ. ಪ್ರಕರಣ ಮುಚ್ಚಿಹಾಕಲು ಕೆಲವು ಕಾಣದ ಕೈಗಳು ಹಿಂದೆ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರು ದೂರಿದರು.
ರಾಜ್ಯ ಸರ್ಕಾರ ಹುಬ್ಬಳ್ಳಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾತರಿಸಿದೆ. ಆದರೆ ಇದರಲ್ಲಿ ನಂಬಿಕೆ ಇಲ್ಲದ ಕಾರಣ ಮೃತ ನೇಹಾಳ ಪೋಷಕರೇ ಹೇಳಿದಂತೆ ಈ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಮಹೇಶ ಟೆಂಗಿನಕಾಯಿ, ನಿರಂಜನ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications