Karnataka Budget 2023 Expectations: ಸಿಎಂ ತವರು ಹುಬ್ಬಳ್ಳಿಯ ನಿರೀಕ್ಷೆಗಳೇನು..?
ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಆಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ ಬಜೆಟ್ 2023ರ ಮೇಲಿನ ಹುಬ್ಬಳ್ಳಿ ಜನತೆಯ ನಿರೀಕ್ಷೆಗಳೇನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿ, ಫೆಬ್ರವರಿ 16: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಡೆಯಲಿರುವ ಬಜೆಟ್ ಮಂಡನೆ ಪ್ರಕ್ರಿಯೆ ಸಾಕಷ್ಟು ಕುತೂಹಲಕ್ಕೆ ಮೂಡಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಜಿಲ್ಲೆಗೆ ಏನೆಲ್ಲಾ ಕೊಡುಗೆ ನೀಡಲಿದ್ದಾರೆ ಎನ್ನುವ ಕುತೂಹಲ ಹುಬ್ಬಳ್ಳಿ ಜನರಲ್ಲಿದೆ. ಹೀಗಾಗಿ ಹುಬ್ಬಳ್ಳಿ ಜನರ ಚಿತ್ತ ಬಜೆಟ್ ನತ್ತ ನೆಟ್ಟಿದೆ.
ಎರಡನೇ ಬಾರಿ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಸವಣೂರು ಕ್ಷೇತ್ರದ ಶಾಸಕರಾದರೂ ಊರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಬೊಮ್ಮಾಯಿ ಅವರ ತವರೂರು. ಫೆಬ್ರವರಿ 17ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಬೊಮ್ಮಾಯಿ ತವರೂರಿಗೆ ಏನೇನು ಕೊಡುಗೆ ನೀಡಲಿದ್ದಾರೆ..? ವಿಶೇಷ ಪ್ಯಾಕೇಜ್ ಘೋಷಿಸುವವರೇ..? ಇಲ್ಲಿನ ಜನತೆ ಇಂತಹ ಅಪಾರ ನಿರೀಕ್ಷೆ ಹೊಂದಿದೆ.
ಹಳೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜೊತೆಗೆ ಹೊಸ ಯೋಜನೆಗಳನ್ನು ಘೋಷಿಸಬೇಕಿದೆ. ಹುಬ್ಬಳ್ಳಿಯಲ್ಲೇ 2020ರಲ್ಲಿ ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮಾವೇಶ ನಡೆಸಲಾಗಿದೆ. ಆಗ ಬರೋಬ್ಬರಿ 82 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ವಾಗ್ದಾನವಾಗಿತ್ತು. ಇದರಲ್ಲಿ ಕೆಲವೊಂದಿಷ್ಟು ಕೈಗಾರಿಕೆಗಳ ಚಾಲನೆಗೆ ಮೊದಲ ಹೆಜ್ಜೆಯನ್ನು ಸರ್ಕಾರ ಇಟ್ಟಿವೆಯಾದರೂ ಕೊರೊನಾದಿಂದಾಗಿ ಉದ್ಯಮಿಗಳು ಈವರೆಗೂ ಕೈಗಾರಿಕೆಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಇದೀಗ ಅವುಗಳಿಗೆ ಮರು ಚಾಲನೆ ನೀಡಬೇಕಿದೆ.

ಇನ್ನು ಹೊಸ ಕೈಗಾರಿಕಾ ವಸಾಹತು ಸ್ಥಾಪನೆಯತ್ತ ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಈಗಿರುವ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಧಾರವಾಡ-ಕಿತ್ತೂರು, ಹುಬ್ಬಳ್ಳಿ-ಶಿಗ್ಗಾಂವಿ, ಹುಬ್ಬಳ್ಳಿ-ಗದಗ, ಹುಬ್ಬಳ್ಳಿ- ಕಾರವಾರ ಹೆದ್ದಾರಿ ಮಾರ್ಗಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಆಗಬೇಕಿದೆ.
ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ಶ್ರೀಕಾರ ಬರೆದು ಒಪ್ಪಂದ ಮಾಡಿಕೊಂಡಿದೆ. ಆದರೆ ಪ್ರಾರಂಭಕ್ಕೆ ಬೇಕಾದ ಪೂರಕ ಕೆಲಸ ಪ್ರಾರಂಭವಾಗಿಲ್ಲ. ಆ ಕೆಲಸ ಬೇಗನೆ ಶುರುವಾಗುವಂತೆ ಮಾಡಬೇಕು. ಇದೇ ವರ್ಷ ಕಾರ್ಯಾರಂಭ ಮಾಡುವಂತಹ ಕೆಲಸವಾಗಬೇಕು. ಇನ್ನು ಮುಂಬೈ-ಚೈನ್ನೈ ಕೈಗಾರಿಕಾ ಕಾರಿಡಾರ್‌ನ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ ಬರುವುದರಿಂದ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಕೆಲಸ ಆಗಬೇಕಿದೆ. ಎಸ್‌ಐಆರ್ ಮಾಡುತ್ತೇವೆ ಎಂದು ಹೇಳಿ ಆಗಿದೆ. ಆದರೆ ಎಸ್‌ಐಆರ್ ತ್ವರಿತಗತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಡಬೇಕು.

ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೆಯ ದೊಡ್ಡನಗರ. ಆದರೆ ಇಲ್ಲಿನ ಘನತ್ಯಾಜ್ಯ ನಿರ್ವಹಣೆ ಮಾತ್ರ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಪ್ರತಿದಿನ 400-500 ಟನ್ ಉತ್ಪನ್ನವಾಗುವ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್‌ನಲ್ಲಿ ಬಿಸಾಡಿ ಬರಲಾಗುತ್ತಿದೆ. ನಿತ್ಯ ಅದಕ್ಕೆ ಬೆಂಕಿ ಹಚ್ಚುವ ಮೂಲಕ ಪರಿಸರ ಮಾಲಿನ್ಯವನ್ನು ಪಾಲಿಕೆಯೇ ಮಾಡುತ್ತಿದೆ. ಅದಕ್ಕಾಗಿ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತಹ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿಯೇ ವಿಶೇಷ ಯೋಜನೆ ಘೋಷಿಸಿ ಅನುಷ್ಠಾನಗೊಳಿಸಬೇಕು ಎನ್ನುವುದು ಹುಬ್ಬಳ್ಳಿ ಜನರ ಬೇಡಿಕೆಯಾಗಿದೆ.
ಇದರೊಂದಿಗೆ ಇಲ್ಲಿನ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಾರಿಗೆ ಸೌಲಭ್ಯ ಹೆಚ್ಚಿಸುವಂತೆ ಕ್ರಮವಾಗಬೇಕು. ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಹೆಬ್ಬಾಗಿಲು. ಆದರಿಂದ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಲಿ ಎನ್ನುವ ನಿರೀಕ್ಷೆ ಇದೆ.












Click it and Unblock the Notifications