12 ವರ್ಷಗಳ ಬಿಜೆಪಿ ನಂಟು ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಬೆಂಬಲಿಗರು
ಹುಬ್ಬಳ್ಳಿ, ಮೇ 04: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್ ಅಸಮಾಧಾನದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆಸಿದ್ದಾರೆ. ಇದೀಗ ಬಿಜೆಪಿಗೆ ಮತ್ತೊಂದು ಆಘಾತವಾಗಿದ್ದು, ಜಗದೀಶ್ ಶೆಟ್ಟರ್ ನೂರಾರು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಹುಬ್ಬಳ್ಳಿ ನಗರದ ಹೊಸೂರಿನಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ, ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ, 12 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ದೇವೇಂದ್ರ ಹರಿವಾಣ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, 'ಈ ಚುನಾವಣೆ ಸೆಮಿಫೈನಲ್ ಇದ್ದ ಹಾಗೆ, ಮುಂದೆ 24ರಲ್ಲಿ ಫೈನಲ್ ಪಂದ್ಯ ಇದೆ ಎಂದು' ಪರೋಕ್ಷವಾಗಿ ಬಿಜೆಪಿಯ ಕೆಲ ನಾಯಕರಿಗೆ ಎಚ್ಚರಿಕೆ ನೀಡಿದರು.
ಜಗದೀಶ ಶೆಟ್ಟರ್ ಪರ ಪ್ರಚಾರ ಸಭೆಯಲ್ಲಿ ಉಭಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ , ಅನಿಲ ಕುಮಾರ್ ಪಾಟೀಲ , ಕಾಂಗ್ರೆಸ್ ಮುಖಂಡರಾದ ಸತೀಶ ಮಹರವಾಡೆ , ಮಂಜುನಾಥ ಕುನ್ನೂರ , ಸದಾನಂದ ಡಂಗನವರ ಎಂ.ಎಂ.ಗೌಡರ , ಪ್ರಭು ಹಿರೇಕೆರೂರ , ಅಲ್ತಾಫ್ ಕಿತ್ತೂರ , ಬಸವರಾಜ್ ಗುರಿಕಾರ , ನಾಗೇಶ ಕಲಬುರ್ಗಿ , ಮಲ್ಲಿಕಾರ್ಜುನ ಸಾಹುಕಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಪ್ಪಿನ ಬೆಟಗೇರಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಪ್ರಿಯಾ ದೇಸಾಯಿ
ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ಅವರ ಪತ್ನಿ ಪ್ರಿಯಾ ದೇಸಾಯಿ ಅವರು ಭರ್ಜರಿ ಪ್ರಚಾರ ಮಾಡುವುದರೊಂದಿಗೆ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಪ್ರಿಯಾ ದೇಸಾಯಿ ಅವರು, ವಿಪರೀತ ಮಳೆಯಿಂದಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಬಡವರು ಮನೆ ಕಳೆದುಕೊಂಡರು. ಅವರ ನೆರವಿಗೆ ಧಾವಿಸಿದ್ದೇ ಅಮೃತ ದೇಸಾಯಿ ಅವರು. ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ನಿಂತ ಅವರು, ಸರ್ಕಾರದಿಂದ 5 ಲಕ್ಷ ರೂಪಾಯಿ ಮಂಜೂರು ಮಾಡಿಸಿ ಇಂದು ಕ್ಷೇತ್ರದಲ್ಲಿ 3500ಕ್ಕೂ ಅಧಿಕ ಮನೆಗಳನ್ನು ಮರು ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಕೊಲೆ, ಸುಲಿಗೆ, ದರೋಡೆ, ದಾಂಧಲೆಗೆ ಅವಕಾಶ ಮಾಡಿಕೊಡದೇ ಕ್ಷೇತ್ರವನ್ನು ಶಾಂತಿಯುತವಾಗಿಟ್ಟಿದ್ದಾರೆ. ಎಲ್ಲ ರಸ್ತೆಗಳನ್ನೂ ಸುಧಾರಣೆ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಉಪ್ಪಿನ ಬೆಟಗೇರಿಯ ಐತಿಹಾಸಿಕ ಮಠ ನವೀಕರಣ ಮಾಡಲಾಗಿದೆ. ಊರ ಹೊರಗಿನ ರಸ್ತೆ ಕಾಂಕ್ರೀಟಿಕರಣವಾಗಿದೆ. ಶಹಾಪುರ ಅವರ ಹೊಲದ ಹತ್ತಿರ ಸುಸಜ್ಜಿತ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಉಪ್ಪಿನ ಬೆಟಗೇರಿಯಿಂದ ಹಾರೋಬೆಳವಡಿ ರಸ್ತೆ ಇಂದು ಬೈಪಾಸ್ ರಸ್ತೆಯಂತಾಗುತ್ತಿದೆ. ಇಷ್ಟೆಲ್ಲ ಅಭಿವೃದ್ಧಿ ಕೆಲಸ ಮಾಡಿದ ಅಮೃತ ದೇಸಾಯಿ ಅವರಿ ನಿಮ್ಮ ಮತ ಮೀಸಲಿರಲಿ ಎಂದರು.
ಈ ವೇಳೆ ಮಾಜಿ ಶಾಸಕಿ ಸೀಮಾ ಮಸೂತಿ, ಶಶಿಕಲಾ ಮಸೂತಿ, ದೀಪಾ ಶಿರೂರ, ಸುಶೀಲಾ ದೊಡವಾಡ, ಪ್ರೇಮಾ ದಿವಟಗಿ, ಚನ್ನಮ್ಮ ಶಿಂದೋಗಿ, ರೂಪಾ ವಿಭೂತಿಮಠ ಸೇರಿದಂತೆ ನೂರಾರು ಮಹಿಳೆಯರು ಪ್ರಿಯಾ ದೇಸಾಯಿ ಅವರಿಗೆ ಸಾಥ್ ನೀಡಿದರು.












Click it and Unblock the Notifications