ನನಗೆ ಅವಕಾಶ ಕೊಡಿ, 24 ಗಂಟೆಗಳಲ್ಲಿ ಮಸೀದಿಯಲ್ಲಿ ಮೈಕ್ ತೆರವುಗೊಳಿಸುತ್ತೇನೆ : ಮುತಾಲಿಕ್
ಹುಬ್ಬಳ್ಳಿ, ಜೂನ್ 2; ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್‌ಗಳನ್ನು ತೆರವುಗೊಳಿಸಿಲ್ಲದ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ ಸಾರಿದ್ದಾರೆ. "ಭಾರತೀಯ ಜನತಾ ಪಕ್ಷದ ಶಾಸಕರ ಕಚೇರಿ ಮುಂದೆ ಧರಣಿ ಮಾಡಲಾಗುವುದು. ಕಾನೂನಿಗೆ ಬಗ್ಗದಿದ್ದರೆ ತಾವೇ ಮೈಕ್‌ಗಳನ್ನು ಕಿತ್ತು ಬಿಸಾಕುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ಗುರುವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಮಸೀದಿಗಳ ಮೇಲೆ ಅಳವಡಿಸಲಾಗಿರುವ ಮೈಕ್‌ಗಳ ನಿಷೇಧ ಮಾಡಿ ಆದೇಶ ಹೊರಡಿಸಿ ಹಲವು ದಿನಗಳು ಕಳೆದಿವೆ. ನಾವು ಒಂದು ವರ್ಷಗಳಿಂದ ಸತತ ಹೋರಾಟ ಮಾಡಿದ್ದೇವೆ. ಆದರೆ, ಸುಪ್ರೀಂಕೋರ್ಟ್ ಆದೇಶ ಇದುವರೆಗೆ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಮಸೀದಿಗಳ ಮೇಲೆ ಮೈಕ್ ಶಬ್ದ ಶುರುವಾಗುತ್ತದೆ. ಇದು ನ್ಯಾಯಾಲಯ ಆದೇಶ ಉಲ್ಲಂಘನೆ. ದಿನದ ಐದು ಬಾರಿ ಮಸೀದಿಗಳಲ್ಲಿನ ಪ್ರಾರ್ಥನೆ ಶಬ್ಧದಿಂದ ಕಿರಿಕಿರಿಯುಂಟಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಕಿರಿಕಿರಿ ಜೊತೆಗೆ ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಮೈಕ್ ಗಳನ್ನು ತೆರುವುಗೊಳಿಸುವಂತೆ ಮಾಡಿರುವ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಹಿಂದುತ್ವದ ಹೆಸರೇಳಿ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಈ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರಿಗೆ ಪಾಠ ಕಲಿಸಬೇಕು ಎನ್ನುವ ಕಾರಣಕ್ಕೆ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು" ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಮೂರು ಕಂಡೀಷನ್ ಇನ್ನೂ ಜಾರಿಯಾಗಿಲ್ಲ
"ಸುಪ್ರೀಂಕೋರ್ಟ್‌ನ ಆದೇಶ ಪಾಲಿಸುತ್ತಿಲ್ಲ. ನಾವೂ ಕೂಡ ಹೋರಾಟದ ಹಿನ್ನಲೆಯಲ್ಲಿ ಕರ್ನಾಟದಕ 1000ಕ್ಕೂ ಹೆಚ್ಚು ದೇವಾಸ್ಥಾನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಸುಪ್ರಭಾತವನ್ನು ಹಾಕಿ ನಮ್ಮ ಪ್ರತಿಭಟನೆ ಮಾಡಿದ್ದೆವು. ಸರಕಾರ ನಮ್ಮ ಹೋರಾಟಕ್ಕೆ ಮನ್ನಣೆ ನೀಡಿ, 5 ಗಂಟೆಗೆ ಯಾವುದೇ ಮೈಕ್ ಬಳಸಬಾರದು, ದೇವಾಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಮೈಕ್ ಬಳಸಲು ಅನುಮತಿ ಹಾಗೂ ಶಬ್ಧದ ಸಂಬಂಧಪಟ್ಟಂತೆ ಮೂರು ಷರತ್ತು ಹಾಕಲಾಗಿತ್ತು. ಆದರೆ ಸರ್ಕಾರದ ಈ ಮೂರು ಷರತ್ತು ಜಾರಿಯಾಗಿಲ್ಲ. ಆದೇಶ ಕಸದಬುಟ್ಟಿಗೆ ಹಾಕಲಾಗಿದೆ" ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಮುಸ್ಲಿಂ ದೇಶಗಳಲ್ಲಿಯೇ ಮೈಕ್ ಬಳಕೆಯಿಲ್ಲ
"ಕಾನೂನಿನ ಉಲ್ಲಂಘನೆಯಾದ ಬಳಿಕ ಈ ಬಗ್ಗೆ ಶ್ರೀರಾಮಸೇನೆ ಹೋರಾಟ ಶುರು ಮಾಡಲು ಅಣಿಯಾಗುತ್ತಿದೆ. ನಮಗೆ ಅವರು ಪ್ರಾರ್ಥನೆ ಮಾಡಲು ಅಭ್ಯಂತರವಿಲ್ಲ. ಆದರೆ, ಶಬ್ದಕ್ಕೆ ನಮ್ಮ ತಕರಾರು ಇದೆ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನಾವೇ ಮಸೀದಿಗಳ ಮೇಲಿನ ಮೈಕ್ ಕಿತ್ತು ಬಿಸಾಕುತ್ತೇವೆ. ಅನೇಕ ಮುಸ್ಲಿಂ ದೇಶಗಳಲ್ಲಿಯೇ ಮಸೀದಿಗಳ ಮೈಕ್ ತೆಗೆಯಲಾಗಿದೆ. ಆದರೆ, ಇಲ್ಲಿ ಮಾತ್ರ ಕಾನೂನು ಪಾಲನೆಯಾಗುತ್ತಿಲ್ಲ" ಎಂದು ಮುತಾಲಿಕ್ ಆರೋಪಿಸಿದರು.

ಬಿಜೆಪಿ ಬಾಯಿ-ಕಿವಿ ಮುಚ್ಚಿಕೊಂಡು ಕುಳಿತಿದೆ
"ಮೈಕ್ ತೆರವು ಕಾರ್ಯಾಚಾರಣೆ ವಿಚಾರದಲ್ಲಿ ಸರ್ಕಾರ ಕೇವಲ ಮಾತಿನಲ್ಲಿಯೇ ಕಾಲಹರಣ ಮಾಡುತ್ತಿದೆ. ಬಿಜೆಪಿ ಗೆದ್ದಿರುವುದು ಹಿಂದುತ್ವದಿಂದ, ಹಿಂದುಗಳ ಮತಗಳ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಹಿಂದು ಸಂಘಟನೆಗಳು ಗೆಲ್ಲಿಸಿರುವುದು ಹಿಂದುತ್ವದ ಕಾರ್ಯಕ್ಕಾಗಿ. ಆದರೆ ಬಿಜೆಪಿ ಅಧಿಕಾರ ಗದ್ದುಗೆಯಲ್ಲಿ ಕುಳಿತು ಮೆರೆಯುತ್ತಿದೆ. ಸುಮಾರು 10 ಹಿಂದೂ ಸಂಘಟನೆಗಳು ಎಲ್ಲಾ ಬಿಜೆಪಿ ಶಾಸಕರ ಕಚೇರಿ ಮುಂದೆ ಜೂನ್ 8ರಂದು ಪ್ರತಿಭಟನೆ ಮಾಡುತ್ತೇವೆ" ಎಂದು ಮುತಾಲಿಕ್ ಹೇಳಿದರು.
ಕಾಶ್ಮೀರಿ ಪಂಡಿತರಿಗೆ ರಕ್ಷಣೆಯಿಲ್ಲ
ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್, "ನೂರಾರು ಹಿಂದೂ ಕುಟುಂಬಗಳು ಭೀತಿಯಿಂದ ಕಾಶ್ಮೀರ ತೊರೆದಿವೆ. ಕುಲ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ (ಹಿಂದೂ) ಶಿಕ್ಷಕಿ ರಜನಿ ಬಲ್ಲಾ (36) ಅವರನ್ನು ಉಗ್ರರು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಹಿಂದೂ ಕುಟುಂಬಗಳು ಕಾಶ್ಮೀರ ತೊರೆಯಲಾರಂಭಿಸಿವೆ. ಕಾಶ್ಮೀರದ ಬಾರಮುಲ್ಲಾ ಪ್ರದೇಶದಲ್ಲಿ ವಾಸಿಸುತ್ತಿರುವ 300 ಹಿಂದೂ ಕುಟುಂಬಗಳ ಪೈಕಿ ಅರ್ಧಕ್ಕೂ ಹೆಚ್ಚು ಬಳಿಕ ಆ ಪ್ರದೇಶ ತೊರೆದಿವೆ. ಹತ್ಯೆಯಿಂದ ಅವರು ಭಯ ಭೀತರಾಗಿದ್ದಾರೆ. ಸರ್ಕಾರ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಿಕೊಡಬೇಕು" ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.












Click it and Unblock the Notifications