ಕೊರ್ಟ್ ಅನುಮತಿ ಪಡೆದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧೆ: ವಿನಯ್ ಕುಲಕರ್ಣಿ
ಧಾರವಾಡ, ನವೆಂಬರ್ 5 : ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡಿದೆ. ಕಳೆದ 25 ವರ್ಷದ ರಾಜಕಾರಣದಲ್ಲಿ ಎಂದೂ ನಾನು ದ್ವೇಷದ ರಾಜಕೀಯ ಮಾಡಿಲ್ಲ. ಸದ್ಯ ನನಗೆ ಕ್ಷೇತ್ರ ಪ್ರವೇಶಕ್ಕೆ ನಿಷೇಧವಿದೆ. ವಿಧಾನಸಭೆ ಚುನಾವಣೆಯೊಳಗೆ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ಆದೇಶ ನೀಡುವ ಭರವಸೆ ಇದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆಗೆ ಶಿಗ್ಗಾವಿ, ಕಿತ್ತೂರು ಸೇರಿದಂತೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ಆದರೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ನಾನು ಸ್ಪರ್ಧಿಸುವೆ. ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯದ ಅನುಮತಿ ಪಡೆದು ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸುವೆ ಎಂದರು.
ಹಣ ಗಳಿಕೆ ಆಸೆ ನನಗಿಲ್ಲ. ಬಡವರು, ದೀನ-ದಲಿತರ ಸೇವೆಯೇ ನನ್ನ ಧ್ಯೇಯ. ನಾನು ಅನ್ಯಾಯ ಸಹಿಸಲ್ಲ. . ನನ್ನೂರಿನ ಜನರ ಸೇವೆಗೆ ನಾನು ಕೆಲಸ ಮಾಡುವ ಹಂಬಲವಿದೆ, ಧಾರವಾಡ ಗ್ರಾಮೀಣದಿಂದ ಈಗಾಗಲೇ 10 ಜನ ಆಕಾಂಕ್ಷಿಗಳಿದ್ದು, ಟಿಕೆಟ್ ನೀಡಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ರಾಜ್ಯಮಟ್ಟದ ನಾಯಕ ಎನ್ನುವುದನ್ನು ಒಪ್ಪುವೆ. ಹಾಗಾಗಿ ಅನ್ಯ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿಗರಿಗೆ ನನ್ನ ಬಗ್ಗೆ ಅಪ್ರಚಾರ ಮಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಹಳೆಯ ವಿಷಯಗಳನ್ನೇ ಪುನಃ ಕೆದಕುತ್ತಿದ್ದಾರೆ ಎಂದು ದೂರಿದರು.

ಯತ್ನಾಳ್, ಬೆಲ್ಲದ್ ಹೇಳಿಕೆ ತಪ್ಪು
ಮುಸ್ಲಿಂ ಮೀಸಲಾತಿ ಕಬಳಿಸಿ, ಪಂಚಮಸಾಲಿ ಸಮುದಾಯಕ್ಕೆ ನೀಡುವ ಬಸನಗೌಡ ಯತ್ನಾಳ್ ಹಾಗೂ ಬೆಲ್ಲದ ಹೇಳಿಕೆ ಅವರವರ ವೈಯಕ್ತಿಕ. ನಾನಿದ್ದ ವೇದಿಕೆಯಲ್ಲಿ ಅವರು ಹೀಗೆ ಹೇಳಿಲ್ಲ. ಆದಾಗ್ಯೂ ಅವರ ಹೇಳಿಕೆ ತಪ್ಪು ಎಂದರು. ಇನ್ನು ತಮ್ಮ ಪ್ರತಿಸ್ಪರ್ಧಿ ಅಮೃತ ದೇಸಾಯಿ ಬಗೆಗೆ ಕೇಳಿದಾಗ ಬುದ್ದಿಮಟ್ಟ ಸಣ್ಣದು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.

ಧಾರವಾಡಕ್ಕೆ ಬರುವಂತೆ ದೇಸಾಯಿ ಸವಾಲ್
ಕೆಲವು ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಂಕಲ್ಪ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಶಾಸಕ ಅಮೃತ್ ದೇಸಾಯಿ ಸವಾಲ್ ಹಾಕಿದ್ದರು.
ಹಾಲು ಕುಡಿದವರೇ ಬದುಕುವುದು ಕಷ್ಟ ವಿಷ ಕುಡಿದವರು ಬದುಕುತ್ತಾರಾ?, ಎಲ್ಲೋ ಕುಳಿತುಕೊಂಡು ಧಾರವಾಡಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಎಲ್ಲೋ ಕುಳಿತು ವಿಡಿಯೋ ಮಾಡಿ ಹೇಳುವುದು ಏಕೆ?, ನಿಮಗಾಗಿಯೇ ಕಾಯುತ್ತಿದ್ದೇನೆ ಬಾ ಎನ್ನುವ ಮೂಲಕ ಕ್ಷೇತ್ರದಿಂದ ಹೊರಗಿರುವ ವಿನಯ್ ಕುಲಕರ್ಣಿಗೆ ದೇಸಾಯಿ ಸವಾಲ್ ಹಾಕಿದ್ದರು. .

ದೇಸಾಯಿಗೆ ತಿರುಗೇಟು ನೀಡಲು ಕುಲಕರ್ಣಿ ಜನ್ಮದಿನಾಚರಣೆ
ಅಮೃತ್ ದೇಸಾಯಿ ಸವಾಲ್ ಎಸೆದ ಬೆನ್ನಲ್ಲೇ , ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರತಿಷ್ಠೆಯನ್ನು ಜಾಹೀರು ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಮಾಜಿ ಸಚಿವ ಕುಲಕರ್ಣಿಯ 54 ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ತಯಾರಿ ನಡೆಸಿದ್ದಾರೆ.

ನವೆಂಬರ್ 7ರಂದು ವಿನಯೋತ್ಸವ
ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಧಾರವಾಡ ಜಿಲ್ಲಾ ಪ್ರವೇಶವನ್ನು ನ್ಯಾಯಾಲಯ ನಿರಾಕರಿಸಿದೆ. ಆದ್ದರಿಂದ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಹುಟ್ಟುಹಬ್ಬಕ್ಕೆ ಸಕಲ ತಯಾರಿಗಳು ನಡೆಯುತ್ತಿವೆ. ಮಾಜಿ ಸಚಿವ ವಿನಯ ಕುಲಕರ್ಣಿ ಅವರ 54ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ಹೆಸರಿನ ಮೇಲೆ 'ಜನನಾಯಕನಿಂದ ಜನ ನಮನ' ಹೆಸರಲ್ಲಿ ನವೆಂಬರ್ 7ರಂದು ಕಿತ್ತೂರಿನಲ್ಲಿ 'ವಿನಯೋತ್ಸವ' ಹಮ್ಮಿಕೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಹ ಆಗಮಿಸಲಿದ್ದು, ಅಂದಾಜು ಎರಡು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications