ಜಗದೀಶ್ ಶೆಟ್ಟರ್ VS ಬಿಜೆಪಿ; ಕಾಂಗ್ರೆಸ್ ಇಲ್ಲಿ ನೆಪ ಮಾತ್ರ!
ಹುಬ್ಬಳ್ಳಿ, ಏಪ್ರಿಲ್ 27; ಜಗದೀಶ್ ಶೆಟ್ಟರ್ ಮತ್ತು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ರಾಜ್ಯ, ದೇಶದ ಗಮನ ಸೆಳೆದಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲುವುದು ಯಾರು? ಎಂಬುದು ಎಲ್ಲರ ಪ್ರಶ್ನೆ. ಶೆಟ್ಟರ್ ಬಿಜೆಪಿಯ ಅಭ್ಯರ್ಥಿಯಾಗಿಯೇ ಕಣಕ್ಕಿಳಿದಿದ್ದರೆ ಚುನಾವಣೆ ಬಗ್ಗೆ ಅಷ್ಟೊಂದು ಕುತೂಹಲ ಇರುತ್ತಿರಲಿಲ್ಲ. ಈಗ ಕಾಂಗ್ರೆಸ್ ಮತ್ತು ಶೆಟ್ಟರ್ ಪ್ರತಿಷ್ಠೆ ಚುನಾವಣಾ ಫಲಿತಾಂಶದಲ್ಲಿ ಅಡಗಿದೆ.
ಈ ಬಾರಿಯ ಚುನಾವಣೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್. ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಮತ್ತು ಜೆಡಿಎಸ್‌ನಿಂದ ಸಿದ್ದಲಿಂಗೇಶ್ವರ ಗೌಡ ಮಹಾಂತ ಒಡೆಯರ್ ಅಭ್ಯರ್ಥಿಗಳು. ಚುನಾವಣೆಯಲ್ಲಿ ಫೈಟ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಕಾಂಗ್ರೆಸ್ ನೆಪ ಮಾತ್ರ. ನೇರವಾದ ಸ್ಪರ್ಧೆ ಜಗದೀಶ್ ಶೆಟ್ಟರ್ vs ಬಿಜೆಪಿ ನಡುವೆ.

1994ರಿಂದ 2018ರ ತನಕ 6 ಚುನಾವಣೆಯನ್ನು ಕ್ಷೇತ್ರದಲ್ಲಿ ಗೆದ್ದಿರುವ ಜಗದೀಶ್ ಶೆಟ್ಟರ್‌ಗೆ ಇದು ಕ್ಷೇತ್ರದಲ್ಲಿ 7ನೇ ಚುನಾವಣೆ. ಆದರೆ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಲ್ಲ ಎಂಬುದು ಗಮನಿಸಬೇಕಾದ ಅಂಶ. ಬಿಜೆಪಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಣೆ ಮಾಡಿದಾಗ ಅವರು ಸಿಡಿದೆದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಜಗದೀಶ್ ಶೆಟ್ಟರ್ vs ಬಿಜೆಪಿ; ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಎರಡು ಭಾಗವಾಗಿದೆ ಎಂಬಂತೆ ಕಾಣುತ್ತಿದೆ. ಒಂದು ಭಾಗ ಬಿಜೆಪಿ ಪಕ್ಷದ ತತ್ವ, ಸಿದ್ಧಾಂತ ನಂಬಿದ ಜನರು. ಬಿಜೆಪಿ ಶೆಟ್ಟರ್‌ಗೆ ಎಷ್ಟು ಅವಕಾಶ ನೀಡಿದೆ. ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಮುಖ್ಯಮಂತ್ರಿಯಾಗಿ, ಮತ್ತೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆದರೆ ಕೇವಲ ಟಿಕೆಟ್ ವಿಚಾರ ಮುಂದಿಟ್ಟುಕೊಂಡು, ರಾಷ್ಟ್ರ ನಾಯಕರು ಮನೆಗೆ ಬಂದರೂ ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದರಲ್ಲ ಎಂಬ ಗುಂಪು.

ಮತ್ತೊಂದು ಗುಂಪು ವೈಯಕ್ತಿಕವಾಗಿ ಜಗದೀಶ್ ಶೆಟ್ಟರ್ ಬೆಂಬಲಿಸುವ ಗುಂಪು. ಅವರು ಯಾವುದೇ ಪಕ್ಷದಲ್ಲಿ ಇರಲಿ, ಅವರ ಸರಳತೆ ಸದಾ ಜನರ ಕೈಗೆ ಸಿಗುವ ರೀತಿ, ಮಾಡಿರುವ ಕೆಲಸ ನಂಬಿ ಅವರನ್ನು ಬೆಂಬಲಿಸುವುದು. ಅಲ್ಲದೇ ಶೆಟ್ಟರ್ ಅಂತಹ ಹಿರಿಯ ನಾಯಕರಿಗೆ ಬಿಜೆಪಿ ನಾಯಕರು ಟಿಕೆಟ್ ಕೊಡದೇ ಇಂತಹ ಅನ್ಯಾಯ ಮಾಡಿದರಲ್ಲ ಎಂದು ಅನುಕಂಪ ಹೊಂದಿರುವ ಗುಂಪು. ಈ ಚುನಾವಣೆಯ ಫಲಿತಾಂಶ ತೀರ್ಮಾನ ಮಾಡುವುದು ಈ ಎರಡು ಗುಂಪುಗಳು ಮಾತ್ರ.
ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರಬಹುದು. ಆದರೆ ಇಲ್ಲಿ ಜಗದೀಶ್ ಶೆಟ್ಟರ್ vs ಬಿಜೆಪಿ ಎಂಬುದು ಎಲ್ಲರ ಲೆಕ್ಕಾಚಾರ. ಶೆಟ್ಟರ್ ಸೋಲಿಸಬೇಕು ಎಂದು ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ದಾರೆ. ಬಿ. ಎಲ್. ಸಂತೋಷ್, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಮುಂತಾದ ನಾಯಕರ ದಂಡೇ ಶೆಟ್ಟರ್ ಸೋಲಿಸಲು ತಂತ್ರ ರೂಪಿಸುತ್ತಿದೆ. ಅದಕ್ಕಾಗಿಯೇ ವೈಯಕ್ತಿಕ ಪ್ರತಿಷ್ಠೆಯೂ ಚುನಾವಣಾ ಫಲಿತಾಂಶದಲ್ಲಿ ಅಡಗಿದೆ.
ಕ್ಷೇತ್ರದ ಮತದಾರರು ಅಂದಾಜು 2,42,736. ವಿವಿಧ ಪಂಗಡಗಳ ಲಿಂಗಾಯತರು ಸೇರಿ ಸುಮಾರು 70 ಸಾವಿರ ಮತಗಳು. ಮುಸ್ಲಿಮರ ಮತಗಳು ಸುಮಾರು 40 ಸಾವಿರ. ಎಸ್‌ಸಿ-ಎಸ್‌ಟಿ 35 ಸಾವಿರ, ಬ್ರಾಹ್ಮಣರು 26 ಸಾವಿರ. ಜಗದೀಶ್ ಶೆಟ್ಟರ್ ವೈಯಕ್ತಿಕ ಮತಗಳು, ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮರ ಮತಗಳು ಮತ್ತು ಬಹು ಸಂಖ್ಯಾತ ಲಿಂಗಾಯತರು ಶೆಟ್ಟರ ಬೆಂಬಲಿಸಿದರೆ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ 7ನೇ ಬಾರಿಗೆ ಜಯಗಳಿಸಿ ದಾಖಲೆ ಬರೆಯಲಿದ್ದಾರೆ.
1999 ರಿಂದ 2018ರ ತನಕ ಜಗದೀಶ್ ಶೆಟ್ಟರ್ ಎದುರಾಳಿಯಾದ ಯಾವುದೇ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. 25 ಸಾವಿರ, 26 ಸಾವಿರ, 17 ಸಾವಿರ, 21 ಸಾವಿರ ಮತಗಳ ಅಂತದಲ್ಲಿ ಜಗದೀಶ್ ಶೆಟ್ಟರ್ ಗೆದ್ದು ಬಂದಿದ್ದಾರೆ. ಈ ಗೆಲುವಿನ ಹಿಂದೆ ಕೆಲಸ ಮಾಡಿದ್ದು, ಬಿಜೆಪಿಯೇ?, ಶೆಟ್ಟರ ವೈಯಕ್ತಿಕ ವರ್ಚಸ್ಸೋ? ಎಂಬುದು ಈ ಬಾರಿಯ ಚುನಾವಣೆಯಲ್ಲಿ ತಿಳಿಯಲಿದೆ.
ಬಿಜೆಪಿ ನಾಯಕರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಮಾಡಿಕೊಂಡಿದ್ದಾರೆ. ಅರವಿಂದ್ ಬೆಲ್ಲದ್ ಚುನಾವಣಾ ಕಣದ ಬಗ್ಗೆ ಮಾತನಾಡಿ, "ಸೆಂಟ್ರಲ್ ಕ್ಷೇತ್ರದಿಂದ 35 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ಅಮಿತ್ ಶಾ ಸೂಚನೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಸೋಲಿಸಿ ಎಂದು ಸಮುದಾಯದ ನಾಯಕರಿಗೆ ಕರೆ ನೀಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ಜಗದೀಶ್ ಶೆಟ್ಟರ್ ನಮಗೆ ಮಾದರಿ ವ್ಯಕ್ತಿಯಾಗಿದ್ದರು. ಈಗ ಅವರ ಎದುರಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಹೇಶ್ ಟೆಂಗಿನಕಾಯಿ ಸ್ಪರ್ಧಿಸುತ್ತಿದ್ದಾರೆ. ನಿಮ್ಮ ಕೈಯಲ್ಲಿ ಬೆಳೆದ ಹುಡುಗ ಅವರು, ಎತ್ತಿ ಬೆಂಗಳೂರಿಗೆ ಕಳಿಸುವುದು ನಿಮ್ಮ ಕೈಯಲ್ಲಿದೆ" ಎಂದು ಹೇಳುವ ಮೂಲಕ ಶೆಟ್ಟರ್ ಪಕ್ಷಕ್ಕೆ ನಿಷ್ಠರಾಗಿ ಉಳಿಯಲಿಲ್ಲ ಎಂಬ ದಾಳ ಉರುಳಿಸಿದರು.
ಕ್ಷೇತ್ರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ತಳಮಟ್ಟದ ಗಟ್ಟಿನೆಲೆಯನ್ನು ಹೊಂದಿದೆ. ಬಿಜೆಪಿ ನಾಯಕರು ವಿವಿಧ ತಂತ್ರಗಳ ಮೂಲಕ ಕ್ಷೇತ್ರದಲ್ಲಿ ಗೆಲ್ಲಲು ಯೋಜನೆ ರೂಪಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆಯೇ?. ಕಾಂಗ್ರೆಸ್‌ಗೆ ಇದು ಸಹಾಯಕವಾಗಲಿದೆಯೇ?, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಫಲಿತಾಂಶ ಏನಾಗಲಿದೆ? ಎಂದು ತಿಳಿಯಲು ಜನರು ಮೇ 13ರ ತನಕ ಕಾಯಬೇಕಿದೆ.












Click it and Unblock the Notifications