Bus Stand: ಅವಳಿನಗರ ಮಂದಿಗೆ ಮತ್ತೊಂದು ಗುಡ್ ನ್ಯೂಸ್
ಹುಬ್ಬಳ್ಳಿ, ಫೆಬ್ರವರಿ 17: ಉತ್ತರ ಕರ್ನಾಟಕದ ಬಹುತೇಕ ಮಂದಿಗೆ ಸಾರಿಗೆ ಕೇಂದ್ರ ಎಂದರೆ ಅದು ಹುಬ್ಬಳ್ಳಿ-ಧಾರವಾಡ ಎಂದರೆ ತಪ್ಪಾಗಲಾರದು. ಕಳೆದ ಕೆಲವು ದಿನಗಳ ಹಿಂದೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಸಮೀಪದ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲಾಗಿತ್ತು. ಅದರ ಬೆನ್ನಲ್ಲೆ ಮತ್ತೊಂದು ಪ್ರಮುಖ ಬಸ್ ನಿಲ್ದಾಣದ ಅಭಿವೃದ್ಧಿಗೆ ಸರ್ಕಾರ ಕೈ ಹಾಕಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಹೌದು, ಹಳೆ ಬಸ್ ನಿಲ್ದಾಣದ ಬಳಿಕ ಗೋಕುಲ ಬಸ್ ನಿಲ್ದಾಣವನ್ನು ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ಪ್ರಯಾಣಿಕ ಸ್ನೇಹಿಯಾಗುವಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಸಂಬಂಧ ಯೋಜನೆ ರೂಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಅವರು ತಿಳಿಸಿದರು.

ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಕೈಗೆತ್ತಿಗೊಳ್ಳಲಾಗಿರುವ ಗೋಕುಲ ರಸ್ತೆ ಬಸ್ ನಿಲ್ದಾಣದ ಮೇಲ್ದರ್ಜೆಗೇರಿಸುವ ಕಾಮಗಾರಿಯ ಪರಿವೀಕ್ಷಣೆ ಮಾಡಿದ ನಂತರ ಅವರು ಮಾತನಾಡಿದರು. ಈ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗುತ್ತಿರುವ ಪ್ರಯಾಣಿಕರ ಆಸನಗಳ ಮೇಲೆ ಕುಳಿತು ದೃಡತೆ ಹಾಗೂ ಆರಾಮದಾಯಕತೆ ಬಗ್ಗೆ ಪರಿಶೀಲನೆ ನಡೆಸಿದರು.
ಅಭಿವೃದ್ಧಿಯಲ್ಲಿ ಏನೆಲ್ಲ ಇರಲಿದೆ?
ಗೋಕುಲ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ, ಆಧುನಿಕ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಆಸನಗಳ ವ್ಯವಸ್ಥೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು, ಶುದ್ಧ ಕುಡಿಯುವ ನೀರು, ಮಹಿಳೆಯರ ವಿಶ್ರಾಂತಿ ಗೃಹ, ಶಿಶು ಆರೈಕೆ ಕೊಠಡಿ, ಬಸ್ ಗಳ ವೇಳಾಪಟ್ಟಿ ತಿಳಿಸುವ ಫಲಕ ಅಳವಡಿಸಲಾಗುವುದು.

ಪ್ರತಿ ಹಂತದಲ್ಲೂ ಉತ್ತಮ ವ್ಯವಸ್ಥೆ ಕಲ್ಪಿಸಲು ಪ್ಲಾನ್ ಮಾಡಲಾಗಿದೆ. ರಾಜ್ಯದಲ್ಲಿಯೇ ಈ ನಿಲ್ದಾಣ ಮಾದರಿಯಾಗುವಂತೆ ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ನಿಲ್ದಾಣದಲ್ಲಿ ಲಭ್ಯ ಖಾಲಿ ಸ್ಥಳವನ್ನು ವಾಣಿಜ್ಯ ಆದಾಯ ಕ್ರೋಢಿಕರಣಕ್ಕೆ ಬಳಸಿಕೊಳ್ಳಲು ಅನುಕೂಲವಾಗುವಂತಿರಬೇಕು. ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ನಂತರದಲ್ಲಿ ಸ್ವಚ್ಛತೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗಳು ಅಹವಾಲು ಸ್ವೀಕರಿಸಿದರು. ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಮುಖ್ಯ ಕಾಮಗಾರಿ ಇಂಜಿನಿಯರ್ ದಿವಾಕರ ಯರಗೊಪ್ಪ ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಕಾಮಗಾರಿಯ ವಿವರಗಳನ್ನು ನೀಡಿದರು.
ಆದ್ಯಕ್ಷರ ಆಪ್ತ ಶಾಖೆಯ ಶರಣಬಸವ, ಪಿ.ಆರ್.ಕಿರಣಗಿ, ಅಧಿಕಾರಿಗಳಾದ ಕೆ.ಎಲ್. ಗುಡೆಣ್ಣವರ, ದೀಪಕ ಜಾಧವ, ರಮೇಶ ಕಾಂಬಳೆ,ಶಿವಕುಮಾರ, ಶಿವಾನಂದ ಶೆಟ್ಟರ, ಮತ್ತಿತರರು ಇದ್ದರು.












Click it and Unblock the Notifications